ನವದೆಹಲಿ: ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆಯ(PMLA) ಹಲವು ನಿಬಂಧನೆಗಳ ಸಾಂವಿಧಾನಿಕತೆಯನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಅರ್ಜಿಗಳ ವಿಚಾರಣೆ ನಡೆಸಿರುವ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ಹೊರಡಿಸಲಿದೆ. ತನಿಖಾಧಿಕಾರಿಗಳು, ಸಾಕ್ಷಿಗಳಿಗೆ ಸಮನ್ಸ್ ನೀಡುವುದು, ಜಾರಿ ನಿರ್ದೇಶನಾಲಯದಿಂದ ಆರೋಪಿಗಳ ಬಂಧನ ಮತ್ತು ವಶಪಡಿಸಿಕೊಳ್ಳುವಿಕೆ ಹಾಗೂ PMLA ಕಾನೂನಿನಡಿ ಜಾಮೀನು ಪ್ರಕ್ರಿಯೆಗೆ ಸಂಬಂಧಿಸಿದ ಹಲವು ಸಮಸ್ಯೆಗಳ ಕುರಿತು ತೀರ್ಪು ಬೆಳಕು ಚೆಲ್ಲುವ ನಿರೀಕ್ಷೆಯಿದೆ.
ರಾಜಕೀಯ ನಾಯಕರು, ಉದ್ಯಮಿಗಳು ಮತ್ತು ಇತರರು ಸೇರಿದಂತೆ ಕಾಯ್ದೆಯ ನಿಬಂಧನೆಗಳ ಅಡಿಯಲ್ಲಿ ಬಂಧಿತರಾಗಿರುವ ಸೂಕ್ಷ್ಮ ಪ್ರಕರಣಗಳ ಮೇಲೆ ಈ ತೀರ್ಪು ಗಾಢ ಪ್ರಭಾವ ಬೀರಲಿದೆ. ಜೊತೆಗೆ, ಪ್ರಸ್ತುತ ಮತ್ತು ಭವಿಷ್ಯದಲ್ಲಿ ಇಡಿ ಮತ್ತು ಇತರೆ ತನಿಖಾ ಸಂಸ್ಥೆಗಳ ಕಾರ್ಯವ್ಯಾಪ್ತಿಯನ್ನೂ ಕೋರ್ಟ್ ಸ್ಪಷ್ಟಪಡಿಸಲಿದೆ.
ಸದ್ಯ ಕಟ್ಟುನಿಟ್ಟಾದ ಕಾನೂನಿನಡಿಯಲ್ಲಿ ಬಂಧನ ಅಧಿಕಾರ, ಜಾಮೀನು ನೀಡುವುದು, ಆಸ್ತಿ ವಶಪಡಿಸಿಕೊಳ್ಳುವುದು ಅಪರಾಧ ಪ್ರಕ್ರಿಯಾ ಸಂಹಿತೆಯ (ಸಿಆರ್‌ಪಿಸಿ) ವ್ಯಾಪ್ತಿಯಿಂದ ಹೊರಗಿದೆ. ಆದ್ರೆ, ತನಿಖಾ ಸಂಸ್ಥೆಗಳು ಪೊಲೀಸ್ ಅಧಿಕಾರವನ್ನು ಚಲಾಯಿಸುತ್ತಿರುವ ರೀತಿಯನ್ನು ಅರ್ಜಿದಾರರು ಕೋರ್ಟ್‌ನಲ್ಲಿ ಪ್ರಶ್ನಿಸಿದ್ದಾರೆ.