ನವದೆಹಲಿ: ಸುಪ್ರೀಂ ಕೋರ್ಟ್ನ ಎಲ್ಲ ಸಾಂವಿಧಾನಿಕ ಪೀಠಗಳ ವಿಚಾರಣೆಯು ಸೆ.27 ರಿಂದ ಲೈವ್ ಸ್ಟ್ರೀಮಿಂಗ್ (ನೇರ ಪ್ರಸಾರ) ಆಗಲಿದೆ. ಪೌರತ್ವ ತಿದ್ದುಪಡಿ ಕಾಯ್ದೆ ಪ್ರಶ್ನಿಸಿದ ಅರ್ಜಿ, ಜಮ್ಮು ಮತ್ತು ಕಾಶ್ಮೀರದ ಕಲಂ 370 ರ ಅಡಿಯಲ್ಲಿನ ವಿಶೇಷ ಸ್ಥಾನಮಾನ ರದ್ದುಗೊಳಿಸಿದ್ದನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿ ಮತ್ತು ಆರ್ಥಿಕತೆಯ ಆಧಾರದ ಮೇಲೆ ಮೇಲ್ಜಾತಿಗಳ ಕೋಟಾದಂಥ ಪ್ರಕರಣಗಳ ವಿಚಾರಣೆಯನ್ನು ಇನ್ನು ಮುಂದೆ ಸಾರ್ವಜನಿಕರು ನೇರ ಪ್ರಸಾರದ ಮೂಲಕ ವೀಕ್ಷಿಸಬಹುದು.
ಭಾರತದ ನೂತನ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಉದಯ್ ಉಮೇಶ್ ಲಲಿತ್ ಅವರು ಅಧಿಕಾರ ವಹಿಸಿಕೊಂಡ ನಂತರ ಇದು ಸುಪ್ರೀಂ ಕೋರ್ಟ್ ಕೈಗೊಂಡ ಪ್ರಮುಖ ನಿರ್ಧಾರವಾಗಿದೆ. ಆದಾಗ್ಯೂ ಆಗಸ್ಟ್ 26 ರಂದು ಆಗಿನ ಮುಖ್ಯ ನ್ಯಾಯಮೂರ್ತಿ ಎನ್‌ವಿ ರಮಣ ಅವರ ನ್ಯಾಯಾಲಯದ ಕಲಾಪವನ್ನು, ಅವರ ಸೇವಾವಧಿಯ ಕೊನೆಯ ದಿನದಂದು ನೇರಪ್ರಸಾರ ಮಾಡಲಾಗಿತ್ತು ಎಂಬುದನ್ನು ಸ್ಮರಿಸಬಹುದು.
ನ್ಯಾಯಮೂರ್ತಿ ಯು.ಯು. ಲಲಿತ್ ಅವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ಪೂರ್ಣ ನ್ಯಾಯಾಲಯದ ಸಭೆ ನಡೆದಿತ್ತು. ಆರಂಭದಲ್ಲಿ ಸಾಂವಿಧಾನಿಕ ಪ್ರಕರಣಗಳ ವಿಚಾರಣೆಯನ್ನು ಲೈವ್ ಸ್ಟ್ರೀಮಿಂಗ್ ಮಾಡಬೇಕು ಮತ್ತು ನಂತರ ಇತರ ಎಲ್ಲ ಪ್ರಕರಣಗಳ ವಿಚಾರಣೆಯನ್ನು ಸಹ ಲೈವ್ ಸ್ಟ್ರೀಮಿಂಗ್ ಮಾಡಲು ಸಭೆಯಲ್ಲಿ ಪಾಲ್ಗೊಂಡಿದ್ದ ನ್ಯಾಯಾಧೀಶರು ಸರ್ವಾನುಮತದಿಂದ ನಿರ್ಧರಿಸಿದರು.