ನವದೆಹಲಿ: ದೇಶಭ್ರಷ್ಟ ಆರ್ಥಿಕ ಅಪರಾಧಿಯಾಗಿರುವ ಉದ್ಯಮಿ ವಿಜಯ್ ಮಲ್ಯ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣದ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ದಂಡಸಮೇತ ಶಿಕ್ಷೆ ವಿಧಿಸಿತು. ಬ್ರಿಟನ್‌ನಲ್ಲಿ ನೆಲೆಸಿರುವ ಮಲ್ಯರನ್ನು ಗಡಿಪಾರು ಮೂಲಕ ಭಾರತಕ್ಕೆ ಕರೆತರಲು ಕೇಂದ್ರ ಸರ್ಕಾರ ಸತತ ಪ್ರಯತ್ನ ನಡೆಸುತ್ತಿದೆ. ಈ ನಡುವೆಯೇ ಅವರಿಗೆ ಮತ್ತೊಂದು ಕಂಟಕ ಎದುರಾಗಿದೆ.
2017ರ ಮೇ 9ರಂದು ನೀಡಲಾಗಿದ್ದ ನ್ಯಾಯಾಂಗ ನಿಂದನೆ ತೀರ್ಪಿನ ಕುರಿತಾದ ಮಲ್ಯ ಅವರ ಪರಾಮರ್ಶನಾ ಅರ್ಜಿಯನ್ನು 2020ರ ಆಗಸ್ಟ್ 30ರಂದು ಸುಪ್ರೀಂಕೋರ್ಟ್ ವಜಾಗೊಳಿಸಿತ್ತು. ತಮಗೆ ನೀಡಲಾದ ಶಿಕ್ಷೆಯ ವಿರುದ್ಧ ಅವರು ಸಲ್ಲಿಸಿದ್ದ ಮೂರು ವರ್ಷಗಳ ಹಳೆಯದಾದ ಮೇಲ್ಮನವಿ ಅರ್ಜಿಯಲ್ಲಿ ಯಾವುದೇ ಅರ್ಹತೆ ಕಾಣಿಸಿಲ್ಲ ಎಂದು ಕೋರ್ಟ್ ಹೇಳಿತ್ತು.
ಇದನ್ನೂ ಓದಿ:ವಿಜಯ್ ಮಲ್ಯ ನ್ಯಾಯಾಂಗ ನಿಂದನೆ ಪ್ರಕರಣ: ವಿಚಾರಣೆ ಮಾ.10ಕ್ಕೆ ಮುಂದೂಡಿದ ಸುಪ್ರೀಂ
ತಮ್ಮ ಮಕ್ಕಳ ಖಾತೆಗೆ 40 ಮಿಲಿಯನ್ ಡಾಲರ್ ಹಣ ವರ್ಗಾವಣೆ ಮಾಡಿದ್ದ ವಿವರ ಬಹಿರಂಗಪಡಿಸಲು ಹಾಗೂ ನ್ಯಾಯಾಲಯದ ಮುಂದೆ ಹಾಜರಾಗುವಂತೆ ನೀಡಲಾಗಿದ್ದ ಸಮನ್ಸ್‌ಗಳನ್ನು ನಿರ್ಲಕ್ಷ್ಯ ಮಾಡಿದ್ದ ಗಂಭೀರ ಪ್ರಕರಣದಲ್ಲಿ 2017ರಲ್ಲಿ ಮಲ್ಯ ಅವರು ತಪ್ಪಿತಸ್ಥರು ಎಂದು ಕೋರ್ಟ್ ತೀರ್ಪು ನೀಡಿದೆ. ಯುನೈಟಡ್ ಸ್ಪಿರಿಟ್ಸ್ ಲಿಮಿಟೆಡ್‌ನ ಅಧ್ಯಕ್ಷ ಸ್ಥಾನದಿಂದ 2016ರ ಫೆಬ್ರವರಿಯಲ್ಲಿ ಕೆಳಗಿಳಿದ ಬಳಿಕ ಬ್ರಿಟನ್ ಲಿಕ್ಕರ್ ಕಂಪನಿ ಡಿಯಾಗಿಯೊದಿಂದ ಅವರು 40 ಮಿಲಿಯನ್ ಡಾಲರ್ (ಸುಮಾರು 600 ಕೋಟಿ ರೂ) ಪಡೆದಿದ್ದರು ಎನ್ನಲಾಗಿದೆ. ಈ ವಿವರವನ್ನು ಅವರು ಬಹಿರಂಗಪಡಿಸಿರಲಿಲ್ಲ.
ಕೋರ್ಟ್ ವಿಧಿಸಿದ ದಂಡದ ಮೊತ್ತವನ್ನು ನಾಲ್ಕು ವಾರಗಳಲ್ಲಿ ಸುಪ್ರೀಂಕೋರ್ಟ್ ಕಾನೂನು ಸೇವಾ ಪ್ರಾಧಿಕಾರಕ್ಕೆ ಠೇವಣಿ ಮಾಡಬೇಕು. ತಪ್ಪಿದಲ್ಲಿ ಎರಡು ತಿಂಗಳ ಶಿಕ್ಷೆಯನ್ನು ಹೆಚ್ಚಿಸಲಾಗುವುದು. ಮಲ್ಯ ಅವರ ಕುಟುಂಬ ಸದಸ್ಯರಿಗೆ ಮುಂದಿನ ನಾಲ್ಕು ವಾರಗಳಲ್ಲಿ 40 ಮಿಲಿಯನ್ ಡಾಲರ್ಗಳಿಗೆ ಶೇ.8ರಷ್ಟು ಬಡ್ಡಿಯಂತೆ ಹಣವನ್ನು ಹಿಂತಿರುಗಿಸುವಂತೆ ಕೋರ್ಟ್ ನಿರ್ದೇಶಿಸಿದೆ. ಒಂದು ವೇಳೆ ವಿಫಲವಾದರೆ ಅವರ ಆಸ್ತಿಗಳನ್ನು ಮುಟ್ಟುಗೋಲು ಹಾಕಿಕೊಳ್ಳುವ ಪ್ರಕ್ರಿಯೆ ಪ್ರಾರಂಭಿಸಲಾಗುವುದು ಎಂದು ನ್ಯಾಯಪೀಠ ಎಚ್ಚರಿಸಿದೆ.