ನವದೆಹಲಿ:ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದು ಮೊದಲ ವಿದ್ಯಮಾನ. ಪ್ರಕರಣವೊಂದರ ವಿಚಾರಣೆಯ ವೇಳೆ ಮೂಕ ವಕೀಲೆಯೊಬ್ಬರು ತಮ್ಮ ವ್ಯಾಖ್ಯಾನಕಾರನ ಸಹಾಯದಿಂದ ಸುಪ್ರೀಂಕೋರ್ಟ್ನಲ್ಲಿ ವಾದ ಮಂಡಿಸಿದ್ದಾರೆ. ಇದೀಗ ಭಾರಿ ಪ್ರಶಂಸೆಗೆ ಒಳಗಾಗಿದೆ. ಜೊತೆಗೆ ದೈಹಿಕ ದೋಷವುಳ್ಳವರೂ ಕೂಡ ಕೋರ್ಟ್ ಮುಂದೆ ವಾದ ಮಂಡನೆ ಮಾಡಬಹುದು ಎಂಬುದಕ್ಕೆ ನಾಂದಿ ಹಾಡಿದೆ.
ವಿಶೇಷಚೇತನರ ಹಕ್ಕುಗಳ ಪ್ರಕರಣದ ಅರ್ಜಿಯೊಂದು ಮುಖ್ಯ ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ಅವರು ಸೋಮವಾರ ವರ್ಚುವಲ್ ವಿಚಾರಣೆಗೆ ತೆಗೆದುಕೊಂಡಿದ್ದರು. ಸಾರಾ ಸನ್ನಿ ಎಂಬ ಶ್ರವಣ ಮತ್ತು ವಾಕ್ ದೋಷವುಳ್ಳ ವಕೀಲೆ ಸಂಕೇತ ಭಾಷೆಯ (ಸಂಜ್ಞೆ ಭಾಷೆ) ಮೂಲಕ ವಾದ ಮಂಡಿಸಿದರು. ಮೊದಲು ಪರದೆಯ ಮೇಲೆ ವಕೀಲೆಯ ವ್ಯಾಖ್ಯಾನಕಾರರನ್ನು ಮಾತ್ರ ತೋರಿಸಲಾಯಿತು. ಇದನ್ನು ಗಮನಿಸಿದ ನ್ಯಾಯಮೂರ್ತಿ ಚಂದ್ರಚೂಡ್ ಅವರು ಸಾರಾ ಅವರನ್ನು ಪರದೆಯ ಮೇಲೆ ತೋರಿಸುವಂತೆ ಹೇಳಿದರು.
ಬಳಿಕ ಇಬ್ಬರನ್ನೂ ವರ್ಚುಯಲ್ ವಿಚಾರಣೆ ತೆಗೆದುಕೊಳ್ಳಲಾಯಿತು. ಕೇಸ್ ಬಗ್ಗೆ ಸಂಕೇತ ಭಾಷೆಯ ಮೂಲಕವೇ ಸಾರಾ ಅವರು ತೀಕ್ಷ್ಣವಾಗಿ ವಾದಿಸಿದರು. ಅವರು ಬಳಸುತ್ತಿದ್ದ ಸಂಕೇತಗಳನ್ನು ಅರ್ಥ ಮಾಡಿಕೊಂಡು ವ್ಯಾಖ್ಯಾನಕಾರರು ಮಾತಿನಲ್ಲಿ ಹೇಳುತ್ತಿದ್ದರು.
ಮಾತು ಬಾರದಿದ್ದರೂ ವಾದ ಮಂಡಿಸಿದ್ದು ಇದೇ ಮೊದಲು:ಮೂಕ ವಕೀಲೆ ಸಾರಾ ಸನ್ನಿ ಅವರು ಮಾತು ಬಾರದಿದ್ದರೂ, ತಮ್ಮ ಕಕ್ಷಿದಾರರ ಪರವಾಗಿ ಕೋರ್ಟ್ನಲ್ಲಿ ನ್ಯಾಯಕ್ಕಾಗಿ ವಾದ ಮಂಡನೆ ಮಾಡಿದ್ದು, ದೇಶದ ನ್ಯಾಯಾಂಗ ಇತಿಹಾಸದಲ್ಲೇ ಇದೇ ಮೊದಲಾಗಿದೆ. ದೈಹಿಕ ನ್ಯೂನತೆಗಳನ್ನೂ ಮೀರಿ ನ್ಯಾಯಾಂಗ ಪ್ರಕ್ರಿಯೆಯಲ್ಲಿ ಎಲ್ಲರೂ ಭಾಗವಹಿಸಬಹುದು ಎಂಬುದನ್ನು ಈ ಪ್ರಕರಣ ಸಾಬೀತು ಮಾಡಿದೆ. ಸಾರಾ ಸನ್ನಿ ಅವರ ಪ್ರತಿವಾದಿಯಾಗಿ ನ್ಯಾಯಾಲಯದ ಸಭಾಂಗಣದಲ್ಲಿ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ ಅವರು ಪೀಠದ ಮುಂದೆ ವಾದಿಸಿದರು.
ವಕೀಲೆಯ ಸಾಹಸಕ್ಕೆ ಮೆಚ್ಚುಗೆ:ವಾಕ್ ದೋಷವುಳ್ಳ ಸಾರಾ ಸನ್ನಿ ಅವರ ಈ ಸಾಹಸಕ್ಕೆ ಖುದ್ದು ನ್ಯಾಯಮೂರ್ತಿ ಚಂದ್ರಚೂಡ್ ಅವರೇ ಬೆರಗಾದರು. ಅವರು ಪ್ರತಿವಾದಿ ವಕೀಲರ ವಾದವನ್ನು ಅರ್ಥ ಮಾಡಿಕೊಂಡು ಕೈ ಬೆರಳುಗಳ ಮೂಲಕ ತಮ್ಮ ವ್ಯಾಖ್ಯಾನಕಾರರಿಗೆ ತಿಳಿಸುತ್ತಿದ್ದರು. ಸಾರಾ ಅವರ ಸಂಕೇತಗಳನ್ನು ಅರ್ಥ ಮಾಡಿಕೊಳ್ಳುತ್ತಿದ್ದ ವ್ಯಾಖ್ಯಾನಕಾರ ಸೌರವ್ ಅವರಿಗೂ ಮೆಚ್ಚುಗೆ ಬಂದಿದೆ.
ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಅವರು ಸಮಾನ ನ್ಯಾಯದ ಪ್ರತಿಪಾದಕರು. ಅಲ್ಲದೇ ವೈಯಕ್ತಿಕವಾಗಿಯೂ ಅವರು ದೈಹಿಕ ನ್ಯೂನತೆವುಳ್ಳವರ ಪರವಾಗಿದ್ದಾರೆ. ಎಲ್ಲದಕ್ಕೂ ಹೆಚ್ಚಾಗಿ ಇಬ್ಬರು ವಿಶೇಷಚೇತನರ ಹೆಣ್ಣು ಮಕ್ಕಳನ್ನು ದತ್ತು ತೆಗೆದುಕೊಂಡಿದ್ದಾರೆ. ಅವರನ್ನು ಇತ್ತೀಚೆಗೆ ಕೋರ್ಟ್ ಹಾಲ್ಗೆ ಕರೆದುಕೊಂಡು ಬಂದು ನಿತ್ಯ ವಿಚಾರಣೆಯ ಹೇಗೆ ನಡೆಯುತ್ತದೆ ಎಂಬುದನ್ನು ತಿಳಿಸಿಕೊಟ್ಟಿದ್ದರು. ಇದು ಅಲ್ಲಿದ್ದ ಎಲ್ಲ ವಕೀಲರಿಗೆ ಅಚ್ಚರಿ ತಂದಿತ್ತು.
ಇದನ್ನೂ ಓದಿ:ಗೋಡೆ ಕೊರೆದು ಒಳ ನುಗ್ಗಿದ ಚಾಲಾಕಿಗಳು.. ₹25 ಕೋಟಿ ಮೌಲ್ಯದ ಚಿನ್ನಾಭರಣ ಕದ್ದ ಖದೀಮರು!