ನವದೆಹಲಿ: ಸಾಂಪ್ರದಾಯಿಕ ಸಾಂಸ್ಕೃತಿಕ ಹಿನ್ನೆಲೆಯ ಜನಪ್ರಿಯ ಕ್ರೀಡೆಗಳಾದ ಕರ್ನಾಟಕದ ಕರಾವಳಿಯ ಕಂಬಳ, ತಮಿಳುನಾಡಿನ ಜಲ್ಲಿಕಟ್ಟು ಹಾಗು ಮಹಾರಾಷ್ಟ್ರ ಎತ್ತಿನ ಬಂದಿ ಓಟಕ್ಕೆ ಅನುಮತಿ ನೀಡುವ ಕಾನೂನನ್ನು ಸುಪ್ರೀಂ ಕೋರ್ಟ್ ಇಂದು (ಗುರುವಾರ) ಎತ್ತಿ ಹಿಡಿದಿದೆ. ಇಂಥ ಕ್ರೀಡೆಗಳಲ್ಲಿ ಪ್ರಾಣಿಗಳನ್ನು ಹಿಂಸಿಸಲಾಗುತ್ತದೆ ಎಂದು ಪ್ರಶ್ನಿಸಿ ಸಲ್ಲಿಸಲಾಗಿದ್ದ ಎಲ್ಲ ಅರ್ಜಿಗಳನ್ನು ನ್ಯಾಯಪೀಠ ವಜಾಗೊಳಿಸುವ ಮೂಲಕ ಮಹತ್ವದ ತೀರ್ಪು ನೀಡಿದೆ.
ನ್ಯಾಯಮೂರ್ತಿ ಕೆ.ಎಂ.ಜೋಸೆಫ್ ನೇತೃತ್ವದ ಐವರು ನ್ಯಾಯಾಧೀಶರನ್ನೊಳಗೊಂಡ ಪೀಠವು, " ಶಾಸಕಾಂಗವು ಜಲ್ಲಿಕಟ್ಟು ಕ್ರೀಡೆಯನ್ನು ತಮಿಳುನಾಡು ರಾಜ್ಯದ ಸಾಂಸ್ಕೃತಿಕ ಮತ್ತು ಪರಂಪರೆಯ ಭಾಗವಾಗಿದೆ ಎಂದು ಘೋಷಿಸಿದೆ. ಹೀಗಿರುವಾಗ ನ್ಯಾಯಾಂಗವು ವಿಭಿನ್ನ ದೃಷ್ಟಿಕೋನವನ್ನು ತೆಗೆದುಕೊಳ್ಳಲು ಸಾಧ್ಯವಿಲ್ಲ" ಎಂದು ಸ್ಪಷ್ಟವಾಗಿ ತಿಳಿಸಿತು.
ಇದನ್ನೂ ಓದಿ :ನಿರ್ಬಂಧಗಳೊಂದಿಗೆ ಜಲ್ಲಿಕಟ್ಟು ನಡೆಸಲು ತಮಿಳುನಾಡು ಸರ್ಕಾರದ ಅನುಮತಿ
ಪ್ರಾಣಿ ಕಲ್ಯಾಣ ಮಂಡಳಿ, ಪೆಟಾ (PETA), ಕ್ಯುಪಾ (CUPA), ಫೆಡರೇಶನ್ ಆಫ್ ಇಂಡಿಯನ್ ಅನಿಮಲ್ ಪ್ರೊಟೆಕ್ಷನ್ ಆರ್ಗನೈಸೇಶನ್ಸ್ ಮತ್ತು ಅನಿಮಲ್ ಇಕ್ವಾಲಿಟಿ, ಯೂನಿಯನ್ ಆಫ್ ಇಂಡಿಯಾ ಮತ್ತು ತಮಿಳುನಾಡು ಸೇರಿದಂತೆ ರಾಜ್ಯ ವಿಧಾನಸಭೆ ಅಂಗೀಕರಿಸಿದ ಪ್ರಾಣಿಗಳ ಮೇಲಿನ ಕ್ರೌರ್ಯ ತಡೆ ಕಾಯ್ದೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದವು. ಈ ಕುರಿತು ವಿಚಾರಣೆ ನಡೆಸಿದ ನ್ಯಾ.ಕೆ.ಎಂ.ಜೋಸೆಫ್, ನ್ಯಾ.ಅಜಯ್ ರಸ್ತೋಗಿ, ನ್ಯಾ.ಅನಿರುದ್ಧ ಬೋಸ್, ನ್ಯಾ.ಹೃಷಿಕೇಶ್ ರಾಯ್ ಮತ್ತು ನ್ಯಾ. ಸಿಟಿ ರವಿಕುಮಾರ್ ಅವರನ್ನೊಳಗೊಂಡ ನ್ಯಾಯಮೂರ್ತಿಗಳ ಪೀಠವು ಈ ಮಹತ್ವದ ತೀರ್ಪು ಪ್ರಕಟಿಸಿದೆ. ಕಂಬಳ, ಜಲ್ಲಿಕಟ್ಟು ಮತ್ತು ಎತ್ತಿನ ಗಾಡಿ ಓಟಕ್ಕೆ ಅವಕಾಶ ನೀಡುವ ರಾಜ್ಯಗಳ ಕಾನೂನುಗಳ ಸಿಂಧುತ್ವವನ್ನು ಪ್ರಶ್ನಿಸಿ ಸಲ್ಲಿಸಲಾದ ಎಲ್ಲ ಅರ್ಜಿಗಳನ್ನು ನ್ಯಾಯಾಲಯ ವಜಾಗೊಳಿಸಿದೆ.