ನವದೆಹಲಿ :ಕಾಂಗ್ರೆಸ್ ವಕ್ತಾರ ರಣ್ದೀಪ್ ಸುರ್ಜೇವಾಲಾ ಅವರಿಗೆ ಸುಪ್ರೀಂ ಕೋರ್ಟ್ ಇಂದು ರಿಲೀಫ್ ನೀಡಿದೆ. 23 ವರ್ಷಗಳ ಹಿಂದಿನ ಪ್ರಕರಣದಲ್ಲಿ ಅವರ ವಿರುದ್ಧ ಜಾರಿಯಾಗಿದ್ದ ಜಾಮೀನು ರಹಿತ ವಾರಂಟ್ನಿಂದ ಸರ್ವೋಚ್ಛ ನ್ಯಾಯಾಲಯವು ಐದು ವಾರಗಳ ಕಾಲ ರಕ್ಷಣೆ ನೀಡಿದೆ.
ವಾರಾಣಸಿಯ ವಿಭಾಗೀಯ ಆಯುಕ್ತರ ನ್ಯಾಯಾಲಯ ಮತ್ತು ಕಚೇರಿ ಆವರಣದಲ್ಲಿ ನಡೆದಿದ್ದ ಹಿಂಸಾತ್ಮಕ ಪ್ರತಿಭಟನೆಯ ಪ್ರಕರಣಕ್ಕೆ ಸಂಬಂಧಿಸಿದಂತೆ ನವೆಂಬರ್ 7ರಂದು ವಾರಾಣಸಿಯ ವಿಶೇಷ ನ್ಯಾಯಾಧೀಶರು (ಸಂಸದರು, ಶಾಸಕರ ಪ್ರಕರಣಗಳ ನ್ಯಾಯಾಲಯ) ಜಾಮೀನು ರಹಿತ ವಾರಂಟ್ ಹೊರಡಿಸಿದ್ದರು. ನವೆಂಬರ್ 21ರಂದು ನ್ಯಾಯಾಲಯಕ್ಕೆ ಸುರ್ಜೇವಾಲಾ ಹಾಜರು ಆಗಬೇಕೆಂದು ಆದೇಶಿಸಿದ್ದರು.
ಹೀಗಾಗಿ ಸುರ್ಜೇವಾಲಾ ತಮ್ಮ ವಿರುದ್ಧ ಹೊರಡಿಸಿದ್ದ ಜಾಮೀನು ರಹಿತ ವಾರಂಟ್ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಡಿವೈ ಚಂದ್ರಚೂಡ್ ಮತ್ತು ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ವಿಶೇಷ ನ್ಯಾಯಾಲಯವು ಹೊರಡಿಸಿದ ಜಾಮೀನು ರಹಿತ ವಾರಂಟ್ ಅಡಿ 5 ವಾರಗಳವರೆಗೆ ಸುರ್ಜೇವಾಲಾ ವಿರುದ್ಧ ಯಾವುದೇ ಕ್ರಮ ತೆಗೆದುಕೊಳ್ಳಬೇಡಿ ಎಂದು ಆದೇಶಿಸಿದೆ. ಅಷ್ಟೇ ಅಲ್ಲದೇ ಜಾಮೀನು ರಹಿತ ವಾರಂಟ್ ರದ್ದತಿಗೊಳಿಸುವಂತೆ ವಾರಾಣಸಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಮುಂದಿನ 4 ವಾರದೊಳಗೆ ಅವರಿಗೆ ಕಾಲಾವಕಾಶ ನೀಡಿ ಕೂಡಾ ಆದೇಶ ಹೊರಡಿಸಿದೆ.