ಉಜ್ಜೈನಿ(ಮಧ್ಯಪ್ರದೇಶ): ವಿಷಕಾರಿ ಹಾವು, ಚೇಳು ಕಚ್ಚಿದರೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸುವುದು ಸರ್ವೆ ಸಾಮಾನ್ಯ. ಆದರೆ, ಮಧ್ಯಪ್ರದೇಶದ ಉಜ್ಜೈನಿಯ ನೀಲಗಂಗಾದಲ್ಲಿ ಜನರು ಓರ್ವ ವ್ಯಕ್ತಿಯ ಬಳಿ ಕರೆದುಕೊಂಡು ಬರುತ್ತಾರೆ. ಕೆಲವೇ ಸೆಕೆಂಡ್ಗಳಲ್ಲಿ ವಿಷ ಹೊರತೆಗೆಯುವ ಇವರು, ಅನೇಕರಿಗೆ ಪುನರ್ಜನ್ಮ ನೀಡುತ್ತಿದ್ದಾರೆ. ಸುಮಾರು 75 ವರ್ಷಗಳಿಂದಲೂ ಈ ಕಾಯಕ ಮಾಡಿಕೊಂಡು ಬರುತ್ತಿರುವ ಇವರ ಕುಟುಂಬ ನೀಲಗಂಗಾ ಪ್ರದೇಶದಲ್ಲಿ ವಾಸವಾಗಿದ್ದು, ಸದ್ಯ ವಿಷ್ಣು ನರ್ವಾಲೆ ಎಂಬುವವರು ವಿಷಕಾರಿ ಅಂಶ ಹೊರತೆಗೆಯುವ ಕೆಲಸ ಮಾಡ್ತಿದ್ದಾರೆ.
ಕೆಲವೇ ಸೆಕೆಂಡ್ಗಳಲ್ಲಿ ವಿಷ ಹೊರಕ್ಕೆ:ಹಾವು, ಚೇಳು, ನಾಯಿ ಸೇರಿದಂತೆ ಯಾವುದೇ ವಿಷಯಕಾರಿ ಹುಳು ಕಚ್ಚಿದರೂ, ಕೆಲವೇ ಸೆಕೆಂಡ್ಗಳಲ್ಲಿ ಬಾಯಿಂದ ವಿಷ ಹೊರತೆಗೆಯುತ್ತಾರೆ. ಹೀಗಾಗಿ, ನಿತ್ಯ ಅನೇಕರು ಇವರ ಬಳಿ ಬರುತ್ತಾರೆ. ತಲೆಮಾರುಗಳಿಂದಲೂ ಈ ಕಾಯಕ ಮಾಡಿಕೊಂಡು ಬರುತ್ತಿರುವ ಕುಟುಂಬ, ವಿಷಕಾರಿ ಜಂತು ಕಚ್ಚಿರುವ ಜಾಗದಲ್ಲಿ ಬ್ಲೇಡ್ನಿಂದ ಕತ್ತರಿಸಿ, ಸ್ವಲ್ಪ ಮಟ್ಟದ ಗಾಯ ಮಾಡುತ್ತಾರೆ. ತದನಂತರ ಬಾಯಿಂದ ವಿಷ ಹೊರತೆಗೆಯಲಾಗುತ್ತದೆ. ಪ್ರತಿದಿನ ಈ ಕೆಲಸ ಮಾಡುವುದಕ್ಕೂ ಮುಂಚಿತವಾಗಿ 30 ನಿಮಿಷಗಳ ಕಾಲ ಕುಟುಂಬದ ಸದಸ್ಯರು ಪೂಜೆ ಮಾಡುತ್ತಾರೆ.
ತದನಂತರ ಗಾಂಜಾ ಸೇವನೆ ಮಾಡಿ, ವಿಷ ಹೊರತೆಗೆಯುವ ಕೆಲಸ ಮಾಡುತ್ತಾರೆ. ವಿಷ್ಣು ಪ್ರಸಾದ್ ನರ್ವಾಲೆ ಕಳೆದ 20 ವರ್ಷಗಳಿಂದ ಈ ಕಾಯಕ ಮಾಡುತ್ತಿದ್ದು, ಇದಕ್ಕೂ ಮುಂಚೆ ಇವರ ತಂದೆ ಈ ಕೆಲಸ ಮಾಡುತ್ತಿದ್ದರು. ಈ ಕುಟುಂಬದ ಸದಸ್ಯರಿಗೆ ಯಾವುದೇ ರೀತಿಯ ತೊಂದರೆ ಕಾಣಿಸಿಕೊಂಡಿಲ್ವಂತೆ. ದೇವರ ಮೇಲೆ ನಂಬಿಕೆ ಇಟ್ಟು ತಾವು ಈ ಸೇವೆ ಮಾಡುವುದಾಗಿ ವಿಷ್ಣು ಹೇಳಿಕೊಂಡಿದ್ದಾರೆ.