ಸಿಯೋನಿ (ಮಧ್ಯಪ್ರದೇಶ):ಬರೋಬ್ಬರಿ 29 ಮರಿಗಳಿಗೆ ಜನ್ಮ ನೀಡಿ ಸೂಪರ್‌ಮಾಮ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದ ಮಧ್ಯಪ್ರದೇಶದ ಪೆಂಚ್ ಹುಲಿ ಸಂರಕ್ಷಿತ ಪ್ರದೇಶದ (ಪಿಟಿಆರ್) ಪ್ರಸಿದ್ಧ ಹೆಣ್ಣು ಹುಲಿ ಸಾವನ್ನಪ್ಪಿದೆ. ಟಿ 15 ಎಂದೂ ಕರೆಯಲ್ಪಡುವ 17 ವರ್ಷದ ಈ ಹುಲಿ ಶನಿವಾರ ಸಂಜೆ ಸಾವನ್ನಪ್ಪಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
2008 ಮತ್ತು 2018 ರ ನಡುವೆ 11 ವರ್ಷಗಳ ಅವಧಿಯಲ್ಲಿ 29 ಮರಿಗಳಿಗೆ ಈ ಹುಲಿ ಜನ್ಮ ನೀಡಿದೆ. ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ (ವನ್ಯಜೀವಿ) ಕಚೇರಿಯ ಅಧಿಕಾರಿಯು ಯಾವುದೇ ಮಾಹಿತಿಯನ್ನು ಬಹಿರಂಗಪಡಿಸದೆ ಹುಲಿಯ ಸಾವನ್ನು ಮಾತ್ರ ಖಚಿತಪಡಿಸಿದ್ದಾರೆ.
ವಯಸ್ಸಾದ ಕಾರಣ ತುಂಬಾ ದುರ್ಬಲವಾಗಿ ಕಾಣುತ್ತಿದ್ದ ಹುಲಿಯನ್ನು ಕೊನೆಯದಾಗಿ ಜನವರಿ 14 ರಂದು ಪಿಟಿಆರ್ ಸಂದರ್ಶಕರು ನೋಡಿದ್ದಾರೆ. ತಜ್ಞರ ಪ್ರಕಾರ, ಹುಲಿಯ ಸರಾಸರಿ ವಯಸ್ಸು ಸುಮಾರು 12 ವರ್ಷಗಳು. ಈ ಹೆಣ್ಣು ಮರಿಗೆ ಮಾರ್ಚ್ 2008 ರಲ್ಲಿ ಅದರ ಕುತ್ತಿಗೆಗೆ ರೇಡಿಯೋ ಕಾಲರ್ ಹಾಕಲಾಗಿತ್ತು. ಆ ರೇಡಿಯೋ ಕಾಲರ್ ಕಾರ್ಯನಿರ್ವಹಿಸುವುದನ್ನು ನಿಲ್ಲಿಸಿದ ನಂತರ ಜನವರಿ 2010 ರಲ್ಲಿ ಮತ್ತೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು. ನಂತರ ಈ ಹುಲಿ "ಕಾಲರ್ವಾಲಿ" ಅಥವಾ T15 ಟೈಗ್ರೆಸ್ ಎಂದು ಪ್ರಸಿದ್ಧವಾಯಿತು ಎಂದು ಅಧಿಕಾರಿಗಳು ಹೇಳಿದ್ದಾರೆ.
ಈವರೆಗೆ ಒಟ್ಟು 29 ಮರಿಗಳಲ್ಲಿ 25 ಬದುಕುಳಿದಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. 526 ಹುಲಿಗಳೊಂದಿಗೆ ಮಧ್ಯಪ್ರದೇಶವು 2018 ರಲ್ಲಿ ಮೊದಲ ಸ್ಥಾನವಾಗಿ ಹೊರಹೊಮ್ಮಿತ್ತು.