ರಾಹಿಲಾ (ಮಧ್ಯಪ್ರದೇಶ): ನಮ್ಮ ಭಾರತದ ಐತಿಹಾಸಿಕ ತಾಣಗಳು ಸಾಕಷ್ಟು ಶ್ರೀಮಂತವಾಗಿವೆ. ಸುಂದರವಾದ ವಾಸ್ತುಶಿಲ್ಪಗಳು ವಿದೇಶಿಗರನ್ನೂ ಆಕರ್ಷಿಸುತ್ತವೆ. ಮಧ್ಯಪ್ರದೇಶದ ರಾಹಿಲಾ ಜಿಲ್ಲೆಯಲ್ಲಿರುವ ಐತಿಹಾಸಿಕ ಭಕ್ತಿಧಾಮ ಸೂರ್ಯ ದೇವಾಲಯವು ಹೆಚ್ಚು ಅದ್ಭುತವಾಗಿದೆ. 1100 ವರ್ಷಗಳಷ್ಟು ಪುರಾತನವಾದ ಈ ದೇವಾಲಯವು ಸೂರ್ಯನಿಗೆ ಸಮರ್ಪಿತವಾಗಿದೆ. ಪೂರ್ವಾಭಿಮುಖವಾಗಿ ಇರುವ ಭಾರತದ ಏಕೈಕ ಸೂರ್ಯ ದೇವಾಲಯ ಇದಾಗಿರುವುದು ವಿಶೇಷ.
ಭಾರತದ ಕೆಲವೆಡೆ ಸೂರ್ಯನನ್ನು ವಿಶೇಷವಾಗಿ ಪೂಜಿಸುವ ಹಬ್ಬ 'ಛತ್ ಪೂಜೆ'. ಈ ಸಮಯದಲ್ಲಿ ರಾಹಿಲಾದ ಸೂರ್ಯ ದೇವಾಲಯವು ಹೆಚ್ಚು ಮಹತ್ವ ಪಡೆದುಕೊಂಡಿದೆ. ಉತ್ತರ ಪ್ರದೇಶ ಮತ್ತು ಬಿಹಾರದ ಜನರು ವಿಶೇಷವಾಗಿ ಭಕ್ತಿ ಮತ್ತು ಉತ್ಸಾಹದಿಂದ ಈ ಪೂಜೆಯನ್ನು ಆಚರಿಸುತ್ತಾರೆ. ರಾಹಿಲಾ ಸೂರ್ಯ ದೇವಾಲಯವು ಸರ್ಕಾರ ಸಂರಕ್ಷಿತ ತಾಣವಾಗಿದೆ. ಮಧ್ಯಪ್ರದೇಶದ ಪುರಾತತ್ವ ಇಲಾಖೆಯ ಪ್ರಕಾರ, ಈ ದೇವಾಲಯವು 10ನೇ ಶತಮಾನಕ್ಕೆ ಸೇರಿದೆ. ಇದು ಕಾಲಾಂತರದಲ್ಲಿ ನಿರ್ನಾಮವಾಗಿ, 18ನೇ ಶತಮಾನದಲ್ಲಿ ಪುನರ್ ನಿರ್ಮಾಣಗೊಂಡಿತು. ಈ ದೇವಾಲಯವು ರಾಹಿಲಾದಿಂದ ಹುಟ್ಟುವ ಸುನಾರ್ ಮತ್ತು ದೇಹಾರ್ ನದಿಗಳ ಸಂಗಮದಲ್ಲಿದೆ.
ರಾಹಿಲಾ ಸೂರ್ಯ ದೇವಾಲಯದ ವಿಶೇಷತೆಗಳೇನು?:ಸಾಗರದ ಸರ್ಕಾರಿ ಕಲಾ ಮತ್ತು ವಾಣಿಜ್ಯ ಕಾಲೇಜಿನ ಇತಿಹಾಸ ವಿಭಾಗದ ಮುಖ್ಯಸ್ಥ ಡಾ.ಭರತ್ ಶುಕ್ಲಾ ಅವರು ರಾಹಿಲಾ ಸೂರ್ಯ ದೇವಾಲಯದ ಮಹತ್ವವನ್ನು ತಿಳಿಸಿದ್ದಾರೆ. ರಾಹಿಲಾದ ಸೂರ್ಯ ದೇವಾಲಯವು ಚಂದೇಲ ರಾಜರ ವಾಸ್ತುಶಿಲ್ಪದ ಕೌಶಲ್ಯಕ್ಕೆ ಸಾಕ್ಷಿಯಾಗಿದೆ. ಐತಿಹಾಸಿಕ ಪ್ರಾಮುಖ್ಯತೆಯುಳ್ಳ ಈ ದೇವಾಲಯವು ಅದ್ಭುತ ಶಿಲ್ಪಕಲೆಯನ್ನು ಪ್ರತಿಬಿಂಬಿಸುತ್ತದೆ.