ಕರ್ನಾಟಕ

karnataka

ETV Bharat / bharat

Bindeshwar Pathak: 'ಭಾರತದ ಟಾಯ್ಲೆಟ್ ಮ್ಯಾನ್' ಖ್ಯಾತಿಯ ಬಿಂದೇಶ್ವರ್ ಪಾಠಕ್ ಇನ್ನಿಲ್ಲ: ರಾಷ್ಟ್ರಪತಿ, ಪ್ರಧಾನಿ ಸಂತಾಪ - ರಾಷ್ಟ್ರಪತಿ ದ್ರೌಪದಿ ಮುರ್ಮು

Bindeshwar Pathak passes away: 'ಸುಲಭ್ ಇಂಟರ್​ನ್ಯಾಷನಲ್​​' ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಇಂದು ಮಧ್ಯಾಹ್ನ ದೆಹಲಿಯಲ್ಲಿ ಹೃದಯಾಘಾತದಿಂದ ವಿಧಿವಶರಾಗಿದ್ದಾರೆ.

Sulabh International founder Bindeshwar Pathak dies after suffering cardiac arrest, PM condoles demise
'ಭಾರತದ ಟಾಯ್ಲೆಟ್ ಮ್ಯಾನ್' ಖ್ಯಾತಿಯ ಬಿಂದೇಶ್ವರ್ ಪಾಠಕ್ ಇನ್ನಿಲ್ಲ

By

Published : Aug 15, 2023, 10:07 PM IST

ನವದೆಹಲಿ: 'ಭಾರತದ ಟಾಯ್ಲೆಟ್ ಮ್ಯಾನ್' ಎಂದೇ ಖ್ಯಾತಿ ಗಳಿಸಿದ್ದ ಸಮಾಜಸೇವಕ ಹಾಗೂ 'ಸುಲಭ್ ಇಂಟರ್​ನ್ಯಾಷನಲ್​​' ಸಂಸ್ಥೆಯ ಸಂಸ್ಥಾಪಕ ಬಿಂದೇಶ್ವರ್ ಪಾಠಕ್ ಮಂಗಳವಾರ ನಿಧನರಾದರು. ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಸಂತಾಪ ಸೂಚಿಸಿದ್ದಾರೆ.

80 ವರ್ಷ ವಯಸ್ಸಿನ ಪಾಠಕ್ 77ನೇ ಸ್ವಾತಂತ್ರ್ಯ ದಿನದ ಅಂಗವಾಗಿ ಧ್ವಜಾರೋಹಣ ನೆರವೇರಿಸಿದ ಬಳಿಕ ಕುಸಿದುಬಿದ್ದರು. ದೆಹಲಿಯ ಏಮ್ಸ್​ಗೆ ಕರೆದೊಯ್ಯಲಾಗಿತ್ತು. ಮಧ್ಯಾಹ್ನ 1.42ರ ಸುಮಾರಿಗೆ ಅವರು ನಿಧನರಾದರು ಎಂದು ವೈದ್ಯರು ಘೋಷಿಸಿದರು. ಪಾಠಕ್ ಅವರು ಪತ್ನಿ, ಇಬ್ಬರು ಪುತ್ರಿಯರು ಮತ್ತು ಓರ್ವ ಮಗನನ್ನು ಅಗಲಿದ್ದಾರೆ.

'ನೈರ್ಮಲ್ಯ ಸಾಂತಾಕ್ಲಾಸ್' ಎಂದೂ ಹೆಸರುವಾಸಿಯಾಗಿದ್ದ ಪಾಠಕ್ ಬಿಹಾರದ ವೈಶಾಲಿ ಜಿಲ್ಲೆಯ ರಾಮ್‌ಪುರ್ ಬಾಘೇಲ್ ಗ್ರಾಮದಲ್ಲಿ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದ್ದರು. 1970ರಲ್ಲಿ ಸಾರ್ವಜನಿಕ ಶೌಚಾಲಯಗಳಿಗೆ ಸಮಾನಾರ್ಥಕವಾದ 'ಸುಲಭ್' ಸಂಸ್ಥೆ ಸ್ಥಾಪಿಸಿದ್ದರು. ಮಾನವ ಹಕ್ಕುಗಳು, ಪರಿಸರ, ಸ್ವಚ್ಛತೆ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸುಲಭ್ ಸಂಸ್ಥೆ ಕಾರ್ಯನಿರ್ವಹಿಸುತ್ತಿದೆ. ಪ್ರಮುಖವಾಗಿ, ಇದರ ಮೂಲಕ ವಿಶೇಷ ತಂತ್ರಜ್ಞಾನವನ್ನು ಬಳಸಿ ಶೌಚಾಲಯಗಳ ನಿರ್ಮಾಣ ಯೋಜನೆಯನ್ನು ಜಾರಿಗೆ ತಂದಿದ್ದರು.

ಸ್ವಚ್ಛ ಭಾರತ ಅಭಿಯಾನ ಆರಂಭವಾಗುವ ಮೊದಲೇ ಇವರು ಜನರಿಗೆ ಅರಿವು ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು. ಸುಲಭ್ ಸಂಸ್ಥೆಯು ದೇಶಾದ್ಯಂತ ರೈಲು ನಿಲ್ದಾಣಗಳು ಮತ್ತು ದೇವಾಲಯ ಆವರಣಗಳಲ್ಲಿ ಸಾರ್ವಜನಿಕ ಶೌಚಾಲಯಗಳನ್ನು ನಿರ್ವಹಿಸುತ್ತಿದೆ. 13 ಲಕ್ಷ ಮನೆಗಳಲ್ಲಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಅಲ್ಲದೇ, 50 ಲಕ್ಷ ಸರ್ಕಾರಿ ಶೌಚಾಲಯಗಳನ್ನು ಸಂಸ್ಥೆಯ ಮೂಲಕ ನಿರ್ಮಿಸಿದ್ದಾರೆ. ಪಾಠಕ್‌ ಅವರ ಸಮಾಜ ಸೇವೆಗಾಗಿ ಪದ್ಮಭೂಷಣ ಪ್ರಶಸ್ತಿ, ಎನರ್ಜಿ ಗ್ಲೋಬ್ ಪ್ರಶಸ್ತಿ, ದುಬೈ ಅಂತಾರಾಷ್ಟ್ರೀಯ ಪ್ರಶಸ್ತಿ, ಸ್ಟಾಕ್‌ಹೋಮ್ ವಾಟರ್ ಪ್ರಶಸ್ತಿ, ಪ್ಯಾರಿಸ್‌ನ ಫ್ರೆಂಚ್ ಸೆನೆಟ್‌ನಿಂದ ಲೆಜೆಂಡ್ ಆಫ್ ಪ್ಲಾನೆಟ್ ಪ್ರಶಸ್ತಿ ಸೇರಿ ರಾಷ್ಟ್ರ ಹಾಗೂ ಅಂತಾರಾಷ್ಟ್ರೀಯ ಪ್ರಶಸ್ತಿಗಳಿಗೆ ಭಾಜನರಾಗಿದ್ದರು.

ರಾಷ್ಟ್ರಪತಿ, ಪ್ರಧಾನಿ ಸಂತಾಪ: ಬಿಂದೇಶ್ವರ್ ಪಾಠಕ್ ನಿಧನಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ. ''ಸುಲಭ್​ ಇಂಟರ್‌ನ್ಯಾಷನಲ್‌ ಸಂಸ್ಥಾಪಕರಾದ ಬಿಂದೇಶ್ವರ ಪಾಠಕ್ ಅವರ ನಿಧನದ ಸುದ್ದಿ ತುಂಬಾ ದುಃಖಕರ. ಪಾಠಕ್ ಸ್ವಚ್ಛತೆಯ ಕ್ಷೇತ್ರದಲ್ಲಿ ಕ್ರಾಂತಿಕಾರಕ ಕ್ರಮ ಕೈಗೊಂಡಿದ್ದರು. ಅವರಿಗೆ ಪದ್ಮಭೂಷಣ ಸೇರಿದಂತೆ ಹಲವು ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಗಿತ್ತು. ಅವರ ಕುಟುಂಬ ಮತ್ತು ಸುಲಭ್ ಇಂಟರ್‌ನ್ಯಾಷನಲ್ ಸದಸ್ಯರಿಗೆ ನನ್ನ ಸಂತಾಪಗಳು'' ಎಂದು ಟ್ವೀಟ್​ ಮಾಡಿದ್ದಾರೆ.

ಪ್ರಧಾನಿ ಮೋದಿ ಟ್ವೀಟ್​ ಮಾಡಿ, ''ಡಾ. ಬಿಂದೇಶ್ವರ ಪಾಠಕ್ ಅವರ ನಿಧನವು ರಾಷ್ಟ್ರಕ್ಕೆ ಅಪಾರ ನಷ್ಟ. ಅವರು ಸಮಾಜದ ಪ್ರಗತಿಗಾಗಿ ಮತ್ತು ದೀನದಲಿತರ ಸಬಲೀಕರಣಕ್ಕಾಗಿ ವ್ಯಾಪಕವಾಗಿ ಶ್ರಮಿಸಿದ ದೂರದೃಷ್ಟಿಯವರಾಗಿದ್ದರು. ಬಿಂದೇಶ್ವರ್ ಸ್ವಚ್ಛ ಭಾರತ ನಿರ್ಮಾಣವನ್ನು ತಮ್ಮ ಧ್ಯೇಯವನ್ನಾಗಿ ಮಾಡಿಕೊಂಡಿದ್ದರು. ಸ್ವಚ್ಛ ಭಾರತ್ ಮಿಷನ್‌ಗೆ ಬೆಂಬಲವನ್ನು ನೀಡಿದರು. ಅವರ ಕಾರ್ಯ ಹಲವಾರು ಜನರಿಗೆ ಸ್ಫೂರ್ತಿ. ಸಂಕಷ್ಟದ ಸಮಯದಲ್ಲಿ ಅವರ ಕುಟುಂಬ ಮತ್ತು ಪ್ರೀತಿಪಾತ್ರರಿಗೆ ನನ್ನ ಆಳವಾದ ಸಂತಾಪ'' ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ವಿಶ್ವದ ಮೂರನೇ ಪ್ರಸಿದ್ಧ ನೇತ್ರ ತಜ್ಞ ಡಾ.ಚಂದ್ರಪ್ಪ ರೇಷ್ಮಿ ನಿಧನ.. ಹುಟ್ಟೂರಲ್ಲೇ ನಡೆದ ಅಂತ್ಯಸಂಸ್ಕಾರ

ABOUT THE AUTHOR

...view details