ಹಮೀರ್‌ಪುರ(ಹಿಮಾಚಲಪ್ರದೇಶ):ಹಿಮಾಚಲ ಪ್ರದೇಶದಲ್ಲಿ ಬಿಜೆಪಿ ಜೊತೆಗೆ ಗುದ್ದಾಡಿ ಅಧಿಕಾರ ಪಡೆದಿರುವ ಕಾಂಗ್ರೆಸ್, ಈಗ ಸಿಎಂ ಆಯ್ಕೆಯ ಗೊಂದಲದಲ್ಲಿದೆ. ಮುಖ್ಯಮಂತ್ರಿ ಆಕಾಂಕ್ಷಿಗಳಾಗಿ ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಅವರು ರೇಸ್ನಲ್ಲಿದ್ದು, ಆಯ್ಕೆಯ ಚೆಂಡು ಹೈಕಮಾಂಡ್ ಅಂಗಳದಲ್ಲಿದೆ.
ಈ ಎಲ್ಲಾ ಗೊಂದಲ ನಡುವೆಯೇ ಸುಖ್ವಿಂದರ್ ಸಿಂಗ್ ಸುಖು ಅವರು ನೀಡಿದ ಹೇಳಿಕೆ ಸಂಚಲನ ಉಂಟು ಮಾಡಿದೆ. "ನಾನು ಸಿಎಂ ಆಗುವ ರೇಸ್‌ನಲ್ಲಿ ಇಲ್ಲ ಎಂದು ಕಾಂಗ್ರೆಸ್ ಮುಖಂಡರು ಹೇಳಿದ್ದಾರೆ. ಹೈಕಮಾಂಡ್ ಯಾವುದೇ ನಿರ್ಧಾರ ತೆಗೆದುಕೊಂಡರೂ ಅದನ್ನು ಒಪ್ಪಿಕೊಳ್ಳುತ್ತೇನೆ" ಎಂದು ಸಿಂಗ್ ಹೇಳಿದ್ದಾರೆ.
"ನಾನು ನಿಷ್ಠಾವಂತ ಕಾರ್ಯಕರ್ತ ಮತ್ತು ಯಾವಾಗಲೂ ಕಾರ್ಯಕರ್ತನಾಗಿಯೇ ಕೆಲಸ ಮಾಡಿದ್ದೇನೆ. ಯಾವತ್ತೂ ಹುದ್ದೆಗಾಗಿ ಆಸೆ ಪಟ್ಟವನಲ್ಲ. ಪಕ್ಷ ಈ ಹಿಂದೆ ನನ್ನನ್ನು ಅಧ್ಯಕ್ಷನನ್ನಾಗಿ ಮಾಡಿತ್ತು. ಹೈಕಮಾಂಡ್ ಆದೇಶವನ್ನು ಪಾಲಿಸುವುದು ನನ್ನ ಕರ್ತವ್ಯ" ಎಂದು ಸುಖು ಹೇಳಿದರು.
ಬಣ ರಾಜಕೀಯ ಜೋರು:ಶುಕ್ರವಾರ ತಡರಾತ್ರಿ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಆಯ್ಕೆಗೆ ಒಮ್ಮತ ಮೂಡಿಬರಲಿಲ್ಲ. ಪ್ರತಿಭಾ ಸಿಂಗ್, ಮುಖೇಶ್ ಅಗ್ನಿಹೋತ್ರಿ ಮತ್ತು ಸುಖವಿಂದರ್ ಸಿಂಗ್ ಸುಖು ಅವರ ಬೆಂಬಲಿಗರು ತಮ್ಮ ನಾಯಕರ ಪರವಾಗಿ ಘೋಷಣೆ ಕೂಗಿದರು. ಇದು ಆಯ್ಕೆಯನ್ನು ಇನ್ನಷ್ಟು ಕಗ್ಗಂಟಾಗಿಸಿತು.