ಚಂಡೀಗಢ :ಕ್ಯಾ.ಅಮರೀಂದರ್ ಸಿಂಗ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಒಂದು ದಿನದ ನಂತರ ಪಂಜಾಬ್ ಕಾಂಗ್ರೆಸ್ ಶಾಸಕಾಂಗ ಪಕ್ಷದ (ಸಿಎಲ್‌ಪಿ) ಸಭೆಯಲ್ಲಿ ಹೊಸ ನಾಯಕನ ಹೆಸರನ್ನು ಅಂತಿಮಗೊಳಿಸಲಾಗುತ್ತೆ.
ಪಂಜಾಬ್ ಶಾಸಕರೊಂದಿಗೆ ಚರ್ಚಿಸಿದ ನಂತರ, ಎಐಸಿಸಿ ಸಿಎಂ ಹುದ್ದೆಗೆ ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರನ್ನು ಪ್ರಸ್ತಾಪಿಸಿದೆ ಎಂದು ಮೂಲಗಳು ತಿಳಿಸಿವೆ. ದೆಹಲಿಯಲ್ಲಿ ಅಂಬಿಕಾ ಸೋನಿ ಜೊತೆಗೆ ರಾಹುಲ್ ಗಾಂಧಿ ನಿವಾಸದಲ್ಲಿ ಸಭೆ ನಡೆಯುತ್ತಿದೆ.
ಅಖಿಲ ಭಾರತ ಕಾಂಗ್ರೆಸ್ ಸಮಿತಿಯ (ಎಐಸಿಸಿ) ಪ್ರಧಾನ ಕಾರ್ಯದರ್ಶಿ ಮತ್ತು ಪಂಜಾಬ್ ವ್ಯವಹಾರಗಳ ಉಸ್ತುವಾರಿ ಹರೀಶ್ ರಾವತ್ ಮತ್ತು ಪಕ್ಷದ ಕೇಂದ್ರ ವೀಕ್ಷಕರಾದ ಅಜಯ್ ಮಾಕೆನ್ ಮತ್ತು ಹರೀಶ್ ಚೌಧರಿ ಇಲ್ಲಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಿದ್ದಾರೆ.
ಪಂಜಾಬ್ ಕಾಂಗ್ರೆಸ್‌ನ ಮಾಜಿ ಮುಖ್ಯಸ್ಥ ಸುನಿಲ್ ಜಖರ್, ಪಕ್ಷದ ಪ್ರಸ್ತುತ ರಾಜ್ಯ ಘಟಕದ ಅಧ್ಯಕ್ಷ ನವಜೋತ್ ಸಿಂಗ್ ಸಿಧು ಮತ್ತು ಸುಖಜಿಂದರ್ ಸಿಂಗ್ ರಾಂಧವ ಅವರ ಹೆಸರು ನೂತನ ಸಿಎಲ್‌ಪಿ ನಾಯಕನ ರೇಸ್ನಲ್ಲಿ ಮುಂಚೂಣಿಯಲ್ಲಿವೆ.
ಇಬ್ಬರು ಉಪಮುಖ್ಯಮಂತ್ರಿಗಳ ನೇಮಕ!:ಪಂಜಾಬ್‌ನಲ್ಲಿ ಸಿಎಂ ಜೊತೆಗೆ ಇಬ್ಬರು ಉಪಮುಖ್ಯಮಂತ್ರಿಗಳನ್ನು ನೇಮಕ ಮಾಡುವ ಸಾಧ್ಯತೆಯಿದೆ. ಓರ್ವ ಹಿಂದೂ ಮತ್ತು ಓರ್ವ ದಲಿತ ಶಾಸಕರನ್ನು ಡಿಸಿಎಂ ಹುದ್ದೆಗೆ ನೇಮಿಸಲಾಗುವುದು ಎಂದು ಮೂಲಗಳು ತಿಳಿಸಿವೆ.