ನವದೆಹಲಿ: ವಂಚನೆಯ ಆರೋಪದಲ್ಲಿ ಜೈಲುಪಾಲಾಗಿರುವ ಸುಕೇಶ ಚಂದ್ರಶೇಖರ್ ಮತ್ತೊಮ್ಮೆ ಪತ್ರವೊಂದನ್ನು ಮಾಧ್ಯಮಗಳ ಮುಂದೆ ಬಹಿರಂಗಪಡಿಸಿದ್ದಾರೆ. ಅಮ್ ಆದ್ಮಿ ಪಕ್ಷದ ಮುಖ್ಯಸ್ಥ ಮತ್ತು ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ತಾವು ಬರೆದ ಪತ್ರಗಳ ಸಮಯವನ್ನು ಈ ಮೂಲಕ ಅವರು ಬಹಿರಂಗಪಡಿಸಿದ್ದಾರೆ. ಕೇಜ್ರಿವಾಲ್ ವಿರುದ್ಧ ತಾವು ಮಾಡಿದ ಆರೋಪಗಳನ್ನು ಒಂದೋ ಅವರು ತಪ್ಪೆಂದು ಸಾಬೀತುಪಡಿಸಲಿ ಅಥವಾ ತಮ್ಮ ಹುದ್ದೆಗೆ ರಾಜೀನಾಮೆ ನೀಡಲಿ ಎಂದು ಸವಾಲು ಹಾಕಿದ್ದಾರೆ.
ಜೈಲಿನಿಂದಲೇ ನಾಲ್ಕನೇ ಪತ್ರ ಬರೆದ ಸುಕೇಶ್;ಜೈಲಿನಿಂದ ಬರೆದ ನಾಲ್ಕನೇ ಪತ್ರದಲ್ಲಿ ಸುಕೇಶ್ ಚಂದ್ರಶೇಖರ್ ಅವರು ಜೈಲು ಆಡಳಿತ ಮತ್ತು ದೆಹಲಿ ಸರ್ಕಾರದ ಸಚಿವ ಸತ್ಯೇಂದ್ರ ಜೈನ್ ಅವರ ಬೆದರಿಕೆ ಮತ್ತು ಒತ್ತಡದಿಂದಾಗಿ ಕಾನೂನಿನ ಮೊರೆ ಹೋಗುವುದು ಸರಿ ಎನಿಸಿತು ಎಂದಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಪತ್ರ ಬರೆಯುವಂತೆ ಯಾರೊಬ್ಬರೂ ಎಲ್ಲಿಂದಲೂ ಒತ್ತಡ ಹೇರಿಲ್ಲ.
ನಾನು ಮುಖ್ಯಮಂತ್ರಿ ಹಾಗೂ ಆಮ್ ಆದ್ಮಿ ಪಕ್ಷದ ಶಿಷ್ಯನಲ್ಲ. ನಾನು ಯಾರಿಗೂ ಹೆದರಲ್ಲ ಎಂದು ಹೇಳಿದ್ದಾರೆ. ಲೆಫ್ಟಿನೆಂಟ್ ಗವರ್ನರ್ ಅವರಿಗೆ ಬರೆದ ಪತ್ರ ತಪ್ಪಾದಲ್ಲಿ ಯಾವುದೇ ಕಾನೂನು ಹೋರಾಟಕ್ಕೂ ಸಿದ್ಧ. ಅದಕ್ಕಾಗಿ ಗಲ್ಲಿಗೇರಲೂ ಸಿದ್ಧ. ನಾನು ಸುಳ್ಳು ಹೇಳುತ್ತಿದ್ದೇನೆ ಎಂದು ಮುಖ್ಯಮಂತ್ರಿಗೆ ಸಾಬೀತುಪಡಿಸಲು ಸಾಧ್ಯವಾಗದಿದ್ದರೆ ಅವರು ರಾಜೀನಾಮೆ ನೀಡಬೇಕು. ಇಡೀ ಪ್ರಕರಣದ ಬಗ್ಗೆ ಸಿಬಿಐ ತನಿಖೆಯಾಗಬೇಕು ಎಂದು ಸುಕೇಶ್ ಆಗ್ರಹಿಸಿದ್ದಾರೆ.