ನವದೆಹಲಿ:ಬಾಲಿವುಡ್ ನಟಿ ಮಣಿಯರಾದ ಜಾಕ್ವೆಲಿನ್ ಫರ್ನಾಂಡೀಸ್, ನೋರಾ ಫತೇಹಿ ಅವರನ್ನು ಸುತ್ತಿಕೊಂಡಿದ್ದ ಸುಕೇಶ್ ಚಂದ್ರಶೇಖರ್ ವಂಚನೆ ಪ್ರಕರಣ ಜಾಲ ಈಗ ಆಪ್ ಪಕ್ಷವನ್ನು ಸುತ್ತಿದೆ. ತಾನು ಜೈಲಿನಲ್ಲಿ ಸುರಕ್ಷಿತವಾಗಿರಲು ಆಪ್ ಸಚಿವ ಸತ್ಯೇಂದ್ರ ಜೈನ್ಗೆ 10 ಕೋಟಿ ರೂಪಾಯಿ ಕೊಟ್ಟಿರುವುದಾಗಿ ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ಸುಕೇಶ್ ಬರೆದಿದ್ದಾನೆ ಎನ್ನಲಾದ ಪತ್ರದಲ್ಲಿ ಆರೋಪಿಸಿದ್ದಾನೆ.
ಸಿರಿವಂತರ ವಂಚಿಸಿ ದೆಹಲಿಯ ತಿಹಾರ್ ಜೈಲುಪಾಲಾಗಿದ್ದ ಸುಕೇಶ್ ಚಂದ್ರಶೇಖರ್ ತನಗೆ ಜೀವ ಬೆದರಿಕೆ ಇದೆ ಎಂದು ತಗಾದೆ ತೆಗೆದಿದ್ದರು. ಬಳಿಕ ಆತನನ್ನು ಏಷ್ಯಾದಲ್ಲೇ ಅತಿ ಸುರಕ್ಷಿತ ಜೈಲಿನಿಂದ ಮಂಡೋಲಿ ಜೈಲಿಗೆ ಸ್ಥಳಾಂತರಿಸಲಾಗಿತ್ತು.
ದೆಹಲಿ ಎಲ್ಜಿಗೆ ಸುಕೇಶ್ ಪತ್ರ:ಜೈಲಿನಲ್ಲಿದ್ದಾಗ ತನಗೆ ಜೀವ ಬೆದರಿಕೆಗಳು ಬಂದಿದ್ದವು. ಇದರಿಂದ ಭದ್ರತೆ ನೀಡಲು ದೆಹಲಿ ಆಪ್ ಸಚಿವ ಸತ್ಯೇಂದ್ರ ಜೈನ್ಗೆ ತಾನು "ಪ್ರೊಟೆಕ್ಷನ್ ಮನಿ"ಯಾಗಿ10 ಕೋಟಿ ರೂಪಾಯಿ ನೀಡಿದ್ದೇನೆ. ಜೈನ್ ತಮಗೆ 2015 ರಿಂದಲೂ ಪರಿಚಯ ಎಂದು ಹೇಳಿಕೊಂಡಿದ್ದಾನೆ.
ಅಲ್ಲದೇ, ಆಮ್ ಆದ್ಮಿ ಪಕ್ಷಕ್ಕೆ ದೇಣಿಗೆಯಾಗಿ 50 ಕೋಟಿ ನೀಡಿದ್ದೇನೆ ಎಂದು ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ಸುಕೇಶ್ ಚಂದ್ರಶೇಖರ್ ಬರೆದ ಪತ್ರದಲ್ಲಿದೆ ಎಂದು ವರದಿಯಾಗಿದೆ. ಈ ಬಗ್ಗೆ ಯಾವುದೇ ದೃಢೀಕರಣದ ಹೇಳಿಕೆ ಬಂದಿಲ್ಲ.
ರಾಜಕೀಯ ಕಿತ್ತಾಟಕ್ಕೆ ನಾಂದಿ:ಸುಕೇಶ್ ಚಂದ್ರಶೇಖರ್ ಮಾಡಿದ ಆರೋಪವನ್ನು ಬಳಸಿಕೊಂಡಿರುವ ಬಿಜೆಪಿ, ಆಪ್ ಪಕ್ಷವನ್ನು ವಂಚಕರ ಪಕ್ಷ ಎಂದು ಜರಿದಿದೆ. ಈಗಾಗಲೇ ಸತ್ಯೇಂದ್ರ ಜೈನ್ ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ಜೈಲು ಸೇರಿದ್ದಾರೆ. ಪಕ್ಷ ಭ್ರಷ್ಟಾಚಾರದಲ್ಲಿ ತೊಡಗಿರುವುದು ಸ್ಪಷ್ಟವಾಗಿದೆ ಎಂದು ಕಿಡಿಕಾರಿದೆ.
ಈ ಆರೋಪವನ್ನು ತಳ್ಳಿ ಹಾಕಿರುವ ಆಪ್ ಸಂಚಾಲಕ, ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್, ಮೊರ್ಬಿ ಸೇತುವೆ ದುರಂತದ ಗಮನವನ್ನು ಬೇರೆಡೆ ಸೆಳೆಯಲು ಬಿಜೆಪಿ ಈ ತಂತ್ರ ಹೆಣೆದಿದೆ. ಪಕ್ಷಕ್ಕೆ ಸುಕೇಶ್ ಚಂದ್ರಶೇಖರ್ ದೇಣಿಗೆ ನೀಡಿಲ್ಲ. ಸಚಿವರಿಗೂ ಹಣ ನೀಡಲಾಗಿಲ್ಲ ಎಂದು ಹೇಳಿಕೊಂಡಿದ್ದಾರೆ.
ಓದಿ:ಮದುವೆಗೆ ಇದ್ದ ಅಡೆತಡೆ ನಿವಾರಣೆಗೆ 2ನೇ ತರಗತಿ ಬಾಲಕಿ ಮೇಲೆ ಅತ್ಯಾಚಾರ.. ದುರುಳನಿಗೆ ಮಾಂತ್ರಿಕ ನೀಡಿದ ಆ ಸಲಹೆ ಏನು?