ನವದೆಹಲಿ :ಅಕ್ರಮ ಹಣ ವರ್ಗಾವಣೆ ಪ್ರಕರಣದಲ್ಲಿ ತಿಹಾರ್ ಜೈಲಿನಲ್ಲಿರುವ ಸುಖೇಶ್ ಚಂದ್ರಶೇಖರ್ ಲೆಫ್ಟಿನೆಂಟ್ ಗವರ್ನರ್ ವಿನಯ್ ಕುಮಾರ್ ಸಕ್ಸೇನಾ ಅವರಿಗೆ ಪತ್ರ ಬರೆದಿದ್ದಾರೆ. ಈ ಪತ್ರದಲ್ಲಿ ಉಪ ಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಮತ್ತು ಸಚಿವ ಸತ್ಯೇಂದ್ರ ಜೈನ್ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ.
ಗವರ್ನರ್ಗೆ ಬರೆಯಲಾದ ಪತ್ರದಲ್ಲಿ, ಸಿಸೋಡಿಯಾ ಮತ್ತು ಜೈನ್ ಅವರ ಮೊಬೈಲ್ ಸಂಖ್ಯೆಯಿಂದ ತಮ್ಮ ಕುಟುಂಬಕ್ಕೆ ಬೆದರಿಕೆ ಕರೆ ಬರುತ್ತಿರುವುದಾಗಿ ಸುಕೇಶ್ ಆರೋಪಿಸಿದ್ದಾರೆ. ಈ ಬಗ್ಗೆ ಲೆಫ್ಟಿನೆಂಟ್ ಗವರ್ನರ್ ಅವರಿಗೆ ಸಂಪೂರ್ಣ ಮಾಹಿತಿ ನೀಡಿರುವುದಾಗಿ ಹೇಳಿದ್ದಾರೆ.
ಇವರು ಜೈಲು ದಾಖಲೆಗಳಿಂದ ನನ್ನ ಕುಟುಂಬದ ಸಂಖ್ಯೆಯನ್ನು ಅಕ್ರಮವಾಗಿ ಪಡೆದಿದ್ದಾರೆ. ತಮ್ಮ ಅಧಿಕಾರವನ್ನು ದುರುಪಯೋಗ ಪಡಿಸಿಕೊಂಡಿದ್ದಾರೆ. ನನ್ನ ಮತ್ತು ನನ್ನ ಕುಟುಂಬದ ಭದ್ರತೆಯಲ್ಲಿ ದೊಡ್ಡ ಲೋಪವಾಗಿದೆ ಎಂದು ಸುಕೇಶ್ ಹೇಳಿದ್ದಾರೆ.
ಸಮಿತಿ ಜೈಲಿಗೆ ಭೇಟಿ ನೀಡಿದ ನಂತರ ಬೆದರಿಕೆ: ನ.15 ರಂದು ಲೆಫ್ಟಿನೆಂಟ್ ಗವರ್ನರ್ ರಚಿಸಿದ ಸಮಿತಿಯು ಜೈಲಿಗೆ ಭೇಟಿ ನೀಡಿತ್ತು. ಈ ಭೇಟಿ ಬಳಿಕ ನ.16 ಮತ್ತು 17 ರಂದು ನನ್ನ ಕುಟುಂಬಕ್ಕೆ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಬಂದಿದೆ. ಫೋನ್ ನಲ್ಲಿ ಜೆಕೆ ಅಲಿಯಾಸ್ ಜೈ ಕಿಶನ್ ಎಂಬ ವ್ಯಕ್ತಿ ಮಾತನಾಡಿದ್ದು, ಈತನನ್ನು ಸಚಿವ ಸತ್ಯೇಂದ್ರ ಜೈನ್ ಜೊತೆ ಭೇಟಿಯಾಗಿದ್ದೆ ಮತ್ತು ಆತ ಉತ್ತರಪ್ರದೇಶದಲ್ಲಿ ವಾಸಿಸುತ್ತಿರುವುದಾಗಿ ಸುಕೇಶ್ ಪತ್ರದಲ್ಲಿ ವಿವರಿಸಿದ್ದಾರೆ.
ಜೀವ ಬೆದರಿಕೆ: ಪತ್ರದಲ್ಲಿ ಮಾಡಿರುವ ಆರೋಪಗಳ ಪ್ರಕಾರ, ಸತ್ಯೇಂದ್ರ ಜೈನ್ ವಿರುದ್ಧ ಹೋಗದಂತೆ ಸುಕೇಶ್ ಕುಟುಂಬಕ್ಕೆ ಜೈ ಕಿಶನ್ ಬೆದರಿಕೆ ಒಡ್ಡಿದ್ದಾರೆ. ಸತ್ಯೇಂದ್ರ ಜೈನ್ ರಾಜಿಗೆ ಸಿದ್ಧರಿದ್ದು, ಇದಕ್ಕೆ ಪೂರಕವಾಗಿ ದುಪ್ಪಟ್ಟು ಹಣವನ್ನು ಹಿಂತಿರುಗಿಸಲಾಗುವುದು ಎಂದು ಹೇಳಿದ್ದಾರೆ. ಈ ಬಗ್ಗೆ ಸಹಕರಿಸದಿದ್ದರೆ ನನ್ನನ್ನು ಜೈಲಿನಲ್ಲೇ ಕೊಲ್ಲುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಬರೆದಿದ್ದಾರೆ. ಇದಕ್ಕೂ ಮುನ್ನ ಸುಕೇಶ್ ಅವರು ತಮ್ಮ ವಕೀಲರ ಮೂಲಕ ಆಪ್ ನಾಯಕರ ವಿರುದ್ಧ ಗಂಭೀರ ಆರೋಪಗಳನ್ನು ಮಾಡಿದ್ದರು.
ಇದನ್ನೂ ಓದಿ :20 ಮಿಲಿಯನ್ ಡಾಲರ್ ರೂಪಾಯಿಗೆ ಪರಿವರ್ತನೆ : ಸತ್ಯೇಂದ್ರ ಜೈನ್ ವಿರುದ್ಧ ಗಂಭೀರ ಆರೋಪ ಮಾಡಿದ ಸುಕೇಶ್ ಚಂದ್ರಶೇಖರ್