ನವದೆಹಲಿ:ಬಹುಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಸುಕೇಶ್ ಚಂದ್ರಶೇಖರ್ ಗುರುವಾರ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೆನಾ ಅವರಿಗೆ ಮತ್ತೊಂದು ಪತ್ರವನ್ನು ಬರೆದಿದ್ದಾರೆ. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮತ್ತು ಸಚಿವ ಸತ್ಯೇಂದರ್ ಜೈನ್ ಅವರು ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸುಕೇಶ್ ಪ್ರಸ್ತುತ ಮಂಡಲಿ ಜೈಲಿನಲ್ಲಿದ್ದು, ಅನೇಕ ಆಮ್ ಆದ್ಮಿ ಪಕ್ಷದ ನಾಯಕರು ನಿರಂತರವಾಗಿ ಬೆದರಿಕೆ ಹಾಕುತ್ತಿದ್ದು, ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಆಪಾದಿಸಿ ಮೂರು ಸುದೀರ್ಘ ಪುಟಗಳ ದೂರು ಸಲ್ಲಿಸಿದ್ದಾರೆ.
ಪ್ರಸ್ತುತ ತಿಹಾರ್ ಜೈಲಿನಲ್ಲಿರುವ ಸಚಿವ ಸತ್ಯೇಂದರ್ ಜೈನ್, ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಲು ಆಮ್ ಆದ್ಮಿ ಪಕ್ಷದ ಟಿಕೆಟ್ ನೀಡುವ ಆಮಿಷ ಹಾಕುತ್ತಿದ್ದಾರೆ. ಇದಕ್ಕೆ ಪ್ರತಿಯಾಗಿ ನಾನು ಆಮ್ ಆದ್ಮಿ ಪಕ್ಷನ ಅನೇಕ ನಾಯಕರು ಮತ್ತು ಅರವಿಂದ್ ಕೇಜ್ರಿವಾಲ್ ಮತ್ತು ಸತ್ಯೇಂದರ್ ಜೈನ್ ವಿರುದ್ಧ ಕೊಟ್ಟಿರುವ ದೂರುಗಳನ್ನು ಹಿಂಪಡೆಯುವಂತೆ ಷರತ್ತು ವಿಧಿಸಿ ಒತ್ತಾಯ ಹೇರುತ್ತಿದ್ದಾರೆ. ಅಲ್ಲದೇ ಅವರು ಪಂಜಾಬ್ನಲ್ಲಿ ಗಣಿಗಳ ಗುತ್ತಿಗೆಯನ್ನು ನೀಡುವ ಭರವಸೆಯನ್ನು ನೀಡುತ್ತಿದ್ದಾರೆ. ತಮ್ಮ ಈ ಆಫರ್ಗಳನ್ನು ಒಪ್ಪಿಕೊಳ್ಳದಿದ್ದರೆ, ಗಂಭೀರ ಪರಿಣಾಮವನ್ನು ಎದುರಿಸುವ ಎಚ್ಚರಿಕೆಯನ್ನು ಜೈನ್ ನೀಡಿದ್ದಾರೆ ಎಂದು ದೂರಿದ್ದಾರೆ.
ಈಗಾಗಲೇ ಅನೇಕ ಪತ್ರ ಬರೆದಿರುವ ವಂಚಕ: ಈ ಹಿಂದೆ ಕೂಡ ಜೈಲಿನಲ್ಲಿ ತಮಗೆ ಎಎಪಿ ನಾಯಕರು ದೂರು ಹಿಂಪಡೆಯುವಂತೆ ಬೆದರಿಕೆ ಒಡ್ಡುತ್ತಿದ್ದಾರೆ. ಅಲ್ಲದೇ, ಜೈಲಿನಲ್ಲಿ ಸಿಬ್ಬಂದಿ ತಮ್ಮ ಮೇಲೆ ಹಲ್ಲೆ ನಡೆಸುತ್ತಿದ್ದು, ತಮ್ಮನ್ನು ಬೇರೊಂದು ಜೈಲಿಗೆ ಸ್ಥಳಾಂತರಿಸುವಂತೆ ಮನವಿ ಮಾಡಿ ಸುಕೇಶ್ ದೆಹಲಿ ಲೆಫ್ಟಿನೆಂಟ್ ಗವರ್ನರ್ಗೆ ಪತ್ರ ಬರೆದಿದ್ದರು. ಮತ್ತೊಂದು ಪತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಮತ್ತು ಜೈನ್ ಅವರ ಕುರಿತು ವೈಯಕ್ತಿಕ ಮಾಹಿತಿ ತಮ್ಮ ಬಳಿ ಇವೆ. ಅವರು ಪಂಜಾಬ್ ಚುನಾವಣೆಗೆ ನನ್ನ ಬಳಿ ಹಣಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಕೂಡ ಆರೋಪಿಸಿದ್ದರು.