ಬೆಂಗಳೂರು:ಕೇಂದ್ರ ಸರ್ಕಾರವು ಕಬ್ಬು ಬೆಳೆಯ ಎಫ್ಆರ್ಪಿ (ನ್ಯಾಯಸಮ್ಮತ ಮತ್ತು ಪ್ರೋತ್ಸಾಹದಾಯಕ ದರ) ದರವನ್ನು ಕೇವಲ 150 ರೂಪಾಯಿ ಹೆಚ್ಚಿಸಿ ರೈತರಿಗೆ ಅನ್ಯಾಯ ಮಾಡಿದೆ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಆರೋಪಿಸಿದ್ದಾರೆ.
ಕಬ್ಬಿನ ಬೆಳೆಗೆ ಬಳಸುವ ಪೊಟ್ಯಾಶ್ ರಸಗೊಬ್ಬರದ ದರ 850 ರಿಂದ 1700 ರೂಪಾಯಿಗೆ, ಡಿಎಪಿ ದರ 1000 ದಿಂದ 1350 ರೂಪಾಯಿಗೆ ಏರಿಕೆಯಾಗಿವೆ. ಹೀಗಿದ್ದರೂ ಕೇಂದ್ರ ಸರ್ಕಾರ ಕಬ್ಬಿನ ಎಫ್ಆರ್ಪಿ ದರವನ್ನು ಕೇವಲ 150 ರೂಪಾಯಿ ಹೆಚ್ಚಿಸಿ ಟನ್ಗೆ 3050 ರೂಪಾಯಿ ದರ ನಿಗದಿ ಮಾಡಿದ್ದು ಸರಿಯಲ್ಲ ಎಂದು ಶಾಂತಕುಮಾರ್ ಹೇಳಿದ್ದಾರೆ.
ಕಬ್ಬಿನಿಂದ ಬರುವ ಸಕ್ಕರೆ ಆಧರಿತ ಇಳುವರಿ ಪ್ರಮಾಣವನ್ನು 10 ರಿಂದ 10.25ಕ್ಕೆ ಏರಿಸಿದ್ದು, ಇದರಿಂದ ರೈತರಿಗೆ 50 ರೂಪಾಯಿ ಹೆಚ್ಚುವರಿ ಹೊರೆಯಾಗಲಿದೆ. ಈ ರೀತಿಯಲ್ಲಿ ಕೇಂದ್ರ ಸರ್ಕಾರ ರೈತ ಸಮುದಾಯಕ್ಕೆ ಮತ್ತೊಂದು ದ್ರೋಹ ಬಗೆದಿದೆ ಎಂದು ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರತಿ ಟನ್ ಕಬ್ಬಿಗೆ 3200 ರೂಪಾಯಿ ಎಫ್ಆರ್ಪಿ ದರ ನಿಗದಿ ಮಾಡಬೇಕೆಂದು ರೈತ ಸಂಘಟನೆಗಳು ಆಗ್ರಹಿಸಿವೆ. 1966ರ ಕಬ್ಬು (ನಿಯಂತ್ರಣ) ಆದೇಶದ ಪ್ರಕಾರ, ಸಕ್ಕರೆ ಕಾರ್ಖಾನೆಗಳು ಕಬ್ಬಿನ ರೈತರಿಗೆ ಪಾವತಿಸಬೇಕಾದ ಕನಿಷ್ಠ ಬೆಲೆ ಎಫ್‌ಆರ್‌ಪಿಯಾಗಿದೆ. ಉತ್ತರ ಪ್ರದೇಶ, ಪಂಜಾಬ್, ಹರ್ಯಾಣ ರಾಜ್ಯಗಳು ತಮ್ಮದೇ ಆದ ಕಬ್ಬಿನ ಬೆಲೆಯನ್ನು ರಾಜ್ಯ ಸಲಹಾ ಬೆಲೆ (ಎಸ್‌ಎಪಿ) ಎಂದು ನಿಗದಿಪಡಿಸುತ್ತವೆ.