ನವದೆಹಲಿ: ರಾಜಕೀಯ ಪಕ್ಷಗಳು ಚುನಾವಣಾ ಬಾಂಡ್‌ಗಳ ಮೂಲಕ ದೇಣಿಗೆ ಸ್ವೀಕರಿಸುವ ವಿಷಯಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಬುಧವಾರ ಮಹತ್ವದ ವಿಚಾರಗಳನ್ನು ಎತ್ತಿದೆ. ಚುನಾವಣಾ ಬಾಂಡ್‌ಗಳ ಯೋಜನೆಯು ಪ್ರತಿಪಕ್ಷಗಳಿಗೆ ನೀಡುವ ದಾನಿಗಳ ಬಗ್ಗೆ ಆಡಳಿತ ಪಕ್ಷವು 'ಆಯ್ದ ಅನಾಮಧೇಯತೆ'ಯ ಮಾಹಿತಿಯನ್ನು ಪಡೆಯಲು ಹೇಗೆ ಸುಲಭಗೊಳಿಸುತ್ತದೆ ಹಾಗೂ ಪ್ರತಿಪಕ್ಷಗಳ ದೇಣಿಗೆಗಳನ್ನು ಹೇಗೆ ಪ್ರಶ್ನಿಸಲಾಗುತ್ತದೆ ಎಂದು ಐವರು ನ್ಯಾಯಾಧೀಶರ ಸಂವಿಧಾನ ಪೀಠ ಕೇಳಿದೆ. ಪಾರದರ್ಶಕ ಯೋಜನೆ ಅಥವಾ ಎಲ್ಲ ರಾಜಕೀಯ ಪಕ್ಷಗಳಿಗೆ ಸಮನಾದ ವೇದಿಕೆ ಹೊಂದಿರುವ ಯೋಜನೆಯೊಂದಿಗೆ ಸರ್ಕಾರ ಬರುವುದನ್ನು ತಡೆಯಲ್ಲ ಎಂದೂ ತಿಳಿಸಿದೆ.
ಮುಖ್ಯ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ನೇತೃತ್ವದಲ್ಲಿ ನ್ಯಾಯಮೂರ್ತಿಗಳಾದ ಸಂಜೀವ್ ಖನ್ನಾ, ಬಿ.ಆರ್.ಗವಾಯಿ, ಜೆ.ಬಿ.ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರನ್ನೊಳಗೊಂಡ ಪೀಠವು, ಕೇಂದ್ರದ ಚುನಾವಣಾ ಬಾಂಡ್‌ಗಳ ಯೋಜನೆಯ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆಯನ್ನು ಎರಡನೇ ದಿನವಾದ ಬುಧವಾರ ಕೂಡ ಮುಂದುವರೆಸಿತು.
ಈ ಯೋಜನೆಯನ್ನು ಸಮರ್ಥಿಸಿಕೊಂಡ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸಿದ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಪ್ರಸ್ತುತ ಯೋಜನೆಯು ರಾಜಕೀಯ ಪಕ್ಷಗಳಿಗೆ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಕಾನೂನು ಬದ್ಧ ಹಣ ಬರುವುದನ್ನು ಖಚಿತಪಡಿಸಿಕೊಳ್ಳುವ ಪ್ರಯತ್ನವಾಗಿದೆ. ಇದರಲ್ಲಿ ಯಾವುದೇ ಪ್ರತೀಕಾರವಿಲ್ಲ ಎಂದು ಖಚಿತಪಡಿಸಿಕೊಳ್ಳಲು ರಾಜಕೀಯ ದೇಣಿಗೆಗಳಲ್ಲಿ ಅನಾಮಧೇಯತೆಯ ಅಗತ್ಯ ಇದೆ ಎಂದು ಒತ್ತಿ ಹೇಳಿದರು.
ಈ ವೇಳೆ ಮಧ್ಯಪ್ರವೇಶ ಮಾಡಿದ ಮುಖ್ಯ ನ್ಯಾಯಮೂರ್ತಿ, ಈ ಯೋಜನೆಯ ಸಮಸ್ಯೆ ಎಂದರೆ 'ಆಯ್ದ ಅನಾಮಧೇಯತೆ' ಆಗಿದೆ. ಇದು ಸಂಪೂರ್ಣವಾಗಿ ಅನಾಮಧೇಯ ಅಥವಾ ಆಯ್ದ ಗೌಪ್ಯತೆಯನ್ನು ಹೊಂದಿಲ್ಲ ಎಂದರು. ''ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಕೂಡಾ ಗೌಪ್ಯತೆ ಕಾಪಾಡಲು ಸಾಧ್ಯವಿಲ್ಲ. ಹಾಗೂ ಕಾನೂನು ಜಾರಿ ಏಜೆನ್ಸಿಗಳಿಗಾದರೂ ಗೌಪ್ಯತೆ ಬಹಿರಂಗಪಡಿಸಬೇಕಾಗುತ್ತದೆ. ಹಾಗಿರುವುದರಿಂದ ದೊಡ್ಡ ದಾನಿಯು ರಾಜಕೀಯ ಪಕ್ಷಕ್ಕೆ ದೇಣಿಗೆ ನೀಡುವ ಉದ್ದೇಶಕ್ಕಾಗಿಯೇ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಅಪಾಯವನ್ನು ಎಂದಿಗೂ ತೆಗೆದುಕೊಳ್ಳಲು ಹೋಗುವುದಿಲ್ಲ. ಹೀಗಾಗಿ ದೊಡ್ಡ ದೊಡ್ಡ ದೇಣಿಗೆದಾರರು ತಮ್ಮ ದೇಣಿಗೆಯನ್ನು ವಿಂಗಡಣೆ ಮಾಡಿ, ಸಣ್ಣ ಮೊತ್ತದ ಚುನಾವಣಾ ಬಾಂಡ್‌ಗಳನ್ನು ಖರೀದಿಸುವ ಜನರಿಗೆ ನೀಡಿ, ಅದನ್ನು ಅಧಿಕೃತ ಬ್ಯಾಂಕಿಂಗ್ ಚಾನಲ್‌ಗಳ ಮೂಲಕ ಖರೀದಿಸುತ್ತಾರೆ '' ಎಂದು ಸಿಐಜೆ ಹೇಳಿದರು.
ಆಗ ಮೆಹ್ತಾ, ''ನಾನು 10 ಕೋಟಿ ನೀಡಲು ಹತ್ತು ಜನರನ್ನು (ತಲಾ 1 ಕೋಟಿ ರೂ. ಠೇವಣಿ ಮಾಡಲು) ಹುಡುಕುವ ಅಪಾಯಕ್ಕೆ ಸಿದ್ಧನಾಗಿಬೇಕಾಗುತ್ತದೆ'' ಎಂದರು. ಇದಕ್ಕೆ ಸಿಐಜೆ, ''ಒಂದು ದೊಡ್ಡ ದಾನಿ ಎಸ್ಬಿಐ ಖರೀದಿಸಿದ ಖಾತೆಯ ಪುಸ್ತಕದಲ್ಲಿ ಎಂದಿಗೂ ತಲೆ ಹಾಕಲ್ಲ. ಈ ಯೋಜನೆಯು ಆಯ್ದ ಅನಾಮಧೇಯತೆ ಹಾಗೂ ಆಯ್ದ ಗೌಪ್ಯತೆಗೆ ಸಮರ್ಥನೀಯವಾಗಿದೆ'' ಎಂಬುದನ್ನು ಗಮನಿಸಿದರು.