ಹರಿದ್ವಾರ (ಉತ್ತರಾಖಂಡ): ಇತ್ತೀಚೆಗೆ ಅನುಮಾನಾಸ್ಪದ ರೀತಿಯಲ್ಲಿ ಸಾವನ್ನಪ್ಪಿದ್ದ ಅಖಾರ ಪರಿಷತ್ ಅಧ್ಯಕ್ಷ ಮಹಾಂತ ನರೇಂದ್ರ ಗಿರಿ ಅವರ ಉತ್ತರಾಧಿಕಾರಿಯಾಗಿ ಬಲವೀರ್ ಗಿರಿ ಅವರನ್ನು ಘೋಷಿಸಲು ನಿರ್ಧರಿಸಲಾಗಿದೆ. ಹರಿದ್ವಾರದ ನಿರಂಜನಿ ಅಖಾರದಲ್ಲಿ ನಡೆದ ಮೊದಲ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ.
ಮಹಂತ್ ನರೇಂದ್ರ ಗಿರಿ ಸಾವಿನ ನಂತರ ಹರಿದ್ವಾರದ ನಿರಂಜನಿ ಅಖಾರದಲ್ಲಿ ನಡೆದ ಮೊದಲ ಸಭೆ ಇದಾಗಿದೆ. ನಿರಂಜನಿ ಅಖಾರದ ಕಾರ್ಯದರ್ಶಿ ರವೀಂದ್ರ ಪುರಿ ಅವರು ಮಾತನಾಡಿ, ಮಹಾಂತ ನರೇಂದ್ರ ಗಿರಿಯ ಉತ್ತರಾಧಿಕಾರಿ ಆಯ್ಕೆ ಮಾಡಲು ಇಂದು ಎಲ್ಲ ದಾರ್ಶನಿಕರ ಸಭೆಯನ್ನು ಕರೆಯಲಾಗಿತ್ತು. ಈ ಸಂದರ್ಭದಲ್ಲಿ ಬಲವೀರ್ ಗಿರಿ ಅವರನ್ನು ಉತ್ತರಾಧಿಕಾರಿಯಾಗಿ ಘೋಷಿಸಲು ಅಖಾರದ ನಾಯಕತ್ವವು ಒಟ್ಟಾಗಿ ನಿರ್ಧರಿಸಿದೆ" ಎಂದು ಹೇಳಿದರು.
ಇದನ್ನು ಓದಿ: ಮಹಾಂತ ಗಿರಿ ಅನುಮಾನಾಸ್ಪದ ಸಾವು: ಸಿಬಿಐ ತನಿಖೆಗೆ ಶಿಫಾರಸು ಮಾಡಿದ ಉ.ಪ್ರ ಸರ್ಕಾರ
ಈ ಕುರಿತಾದ ಔಪಚಾರಿಕ ಘೋಷಣೆಯನ್ನು ಸಭೆಯ ನಂತರ ಮಾಡಲಾಗುವುದು ಎಂದರು. ಸೆಪ್ಟೆಂಬರ್ 20 ರಂದು ಅಖಿಲ ಭಾರತೀಯ ಅಖಾರ ಪರಿಷತ್ತಿನ ಅಧ್ಯಕ್ಷರಾದ ಮಹಾಂತ ನರೇಂದ್ರ ಗಿರಿ ಅವರ ಮೃತದೇಹ ನೇಣುಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿತ್ತು.
ಅಷ್ಟೇ ಅಲ್ಲದೆ, ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬಹು ಪುಟಗಳ ಸೂಸೈಡ್ ನೋಟ್ ಕೂಡ ಪತ್ತೆಯಾಗಿತ್ತು. ಈ ಸಂಬಂಧ ಈಗಾಗಲೇ ಅವರ ಶಿಷ್ಯ ಸೇರಿದಂತೆ ನಾಲ್ವರನ್ನು ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಪ್ರಕರಣವನ್ನ ಉತ್ತರಪ್ರದೇಶ ಸರ್ಕಾರ ಈಗಾಗಲೇ ಸಿಬಿಐಗೆ ನೀಡಿದೆ. ಸಿಬಿಐ ಈ ಸಂಬಂಧ ತನಿಖೆ ತೀವ್ರಗೊಳಿಸಿದೆ.
ಆರೋಪಿ ಆನಂದ ಗಿರಿ ವಿಚಾರಣೆ:
ಮಹಾಂತ ನರೇಂದ್ರ ಗಿರಿ ಆತ್ಮಹತ್ಯೆ ಮಾಡಿಕೊಂಡ ಕೊಠಡಿಯಲ್ಲಿ ಬಹು ಪುಟಗಳ ಸೂಸೈಡ್ ನೋಟ್ ಕೂಡ ಪತ್ತೆಯಾಗಿತ್ತು. ಆ ಪತ್ರದಲ್ಲಿ ಶಿಷ್ಯ ಆನಂದ ಗಿರಿ ನೀಡುತ್ತಿದ್ದ ಕಿರುಕುಳದಿಂದ ಬೇಸತ್ತು ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಆನಂದ್ ಗಿರಿಯನ್ನು ಸಿಬಿಐ ಅಧಿಕಾರಿಗಳು ಸುಮಾರು 8 ಗಂಟೆಗಳ ಕಾಲ ವಿಚಾರಣೆ ನಡೆಸಿದ್ದಾರೆ.