ಚೆನ್ನೈ:ಇಸ್ರೋ ವಿಜ್ಞಾನಿಗಳು ಇಂದು ಆಂಧ್ರಪ್ರದೇಶದ ಶ್ರೀಹರಿಕೋಟಾದ ಬಾಹ್ಯಾಕಾಶ ನಿಲ್ದಾಣದಿಂದ ಭೂ ವೀಕ್ಷಣಾ ಉಪಗ್ರಹ ಓಷನ್‌ಸ್ಯಾಟ್ ಮತ್ತು ಇತರ ಎಂಟು ಗ್ರಾಹಕ ಉಪಗ್ರಹಗಳನ್ನು ಹೊತ್ತ ಪಿಎಸ್‌ಎಲ್‌ವಿ-ಸಿ 54 ರಾಕೆಟ್ ಅನ್ನು ಯಶಸ್ವಿಯಾಗಿ ಉಡಾವಣೆ ಮಾಡಿದ್ದಾರೆ. ವಿಶೇಷವೆಂದರೆ ಈ ರಾಕೆಟ್ ಬೆಂಗಳೂರು ಮೂಲದ ಪಿಕ್ಸೆಲ್ ಅಭಿವೃದ್ಧಿ ಪಡಿಸಿದ ಭಾರತದ ಮೊದಲ ಖಾಸಗಿ ನಿರ್ಮಿತ ಭೂ ವೀಕ್ಷಣಾ ಉಪಗ್ರಹ 'ಆನಂದ್' ಅನ್ನು ಕಕ್ಷೆಗೆ ಹೊತ್ತೊಯ್ದಿದೆ.
ಪೋಲಾರ್ ಸ್ಯಾಟಲೈಟ್ ಲಾಂಚ್ ವೆಹಿಕಲ್‌ನ (ಪಿಎಸ್‌ಎಲ್‌ವಿ) 56ನೇ ರಾಕೆಟ್ ಇದಾಗಿದ್ದು, ಪಿಎಸ್‌ಎಲ್‌ವಿ-ಎಕ್ಸ್‌ಎಲ್ ಆವೃತ್ತಿಯ 24ನೇ ಉಡಾವಣೆಯೂ ಹೌದು. ಇಂದು ಬೆ. 11.56ಕ್ಕೆ ಶ್ರೀಹರಿಕೋಟಾದ ಸತೀಶ್ ಧವನ್ ಬಾಹ್ಯಾಕಾಶ ಕೇಂದ್ರದಲ್ಲಿರುವ ಮೊದಲ ಉಡಾವಣಾ ಕೇಂದ್ರದಿಂದ ಇದನ್ನು ಸನ್ ಸಿಂಕ್ರೋನಸ್ ಕಕ್ಷೆಗೆ ಉಡಾವಣೆ ಮಾಡಲಾಯಿತು.
ರಾಕೆಟ್‌ನ ಪ್ರಾಥಮಿಕ ಪೇಲೋಡ್ ಓಷನ್‌ಸ್ಯಾಟ್ ಅನ್ನು ಕಕ್ಷೆ-1 ರಲ್ಲಿ ಬೇರ್ಪಡಿಸಲಾಗುತ್ತದೆ. ಆದರೆ ಇತರ ಎಂಟು ನ್ಯಾನೊ-ಉಪಗ್ರಹಗಳನ್ನು ಗ್ರಾಹಕರ ಅಗತ್ಯತೆಗಳ ಆಧಾರದ ಮೇಲೆ ವಿವಿಧ ಕಕ್ಷೆಗಳಲ್ಲಿ ಇರಿಸಲಾಗುತ್ತದೆ. 321 ಟನ್ಗಳಷ್ಟು ದ್ರವ್ಯರಾಶಿ ಎತ್ತುವ 44.4-ಮೀಟರ್ ಎತ್ತರದ PSLV-C54 ನಲ್ಲಿ ಪ್ರಾಥಮಿಕ ಪೇಲೋಡ್ ಸೇರಿದಂತೆ, ಒಂಬತ್ತು ಉಪಗ್ರಹಗಳನ್ನು ಕಳುಹಿಸಲಾಗಿದೆ ಎಂದು ಇಸ್ರೋ ಹೇಳಿದೆ.
ಇಸ್ರೋ ವಿಜ್ಞಾನಿಗಳು ಕೈಗೊಂಡಿರುವ ಈ ಕಾರ್ಯಾಚರಣೆ ಇದುವರೆಗಿನ ದೀರ್ಘಾವಧಿ ಕಾರ್ಯಾಚರಣೆಗಳಲ್ಲಿ ಒಂದಾಗಿದ್ದು, ಇಲ್ಲಿ ವಿಜ್ಞಾನಿಗಳು PSLV-C54 ಉಡಾವಣಾ ವಾಹನದಲ್ಲಿ ಎರಡು-ಕಕ್ಷೆಯ ಬದಲಾವಣೆಯ ಥ್ರಸ್ಟರ್‌ಗಳನ್ನು (ಒಸಿಟಿ) ಬಳಸಿಕೊಡಿದ್ದು, ಇದರ ಮೂಲಕ ರಾಕೆಟ್‌ನ ಕಕ್ಷೆಯನ್ನು ಬದಲಾಯಿಸುತ್ತಾರೆ. ಭೂ ವೀಕ್ಷಣಾ ಉಪಗ್ರಹ ಕಕ್ಷೆ-1ರಲ್ಲಿ ಬೇರ್ಪಡಿಸಿ, ಉಳಿದ ಪ್ರಯಾಣಿಕ ಪೇಲೋಡ್‌ಗಳನ್ನು ಕಕ್ಷೆ-2ರಲ್ಲಿ ಬೇರ್ಪಡಿಸಲಾಗುವುದು ಎಂದು ಇಸ್ರೋ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ.