ಜೋಧಪುರ(ರಾಜಸ್ಥಾನ): ಮನಸು ಮಾಡಿದರೆ ಏನು ಬೇಕಾದರೂ ಸಾಧನೆ ಮಾಡಬಹುದು ಎಂಬುದಕ್ಕೆ ನಮ್ಮ ಮುಂದೆ ಅನೇಕ ನಿದರ್ಶನಗಳಿವೆ. ಸದ್ಯ ಅಂತಹದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಜೋಧಪುರ ಮಹಾನಗರ ಪಾಲಿಕೆಯಲ್ಲಿ ಪೌರಕಾರ್ಮಿಕೆಯಾಗಿ ಕೆಲಸ ಮಾಡ್ತಿದ್ದ ಮಹಿಳೆ ಇದೀಗ ಜಿಲ್ಲಾಧಿಕಾರಿಯಾಗಿ ನೇಮಕಗೊಳ್ಳಲಿದ್ದು, ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಪಾಸ್ ಮಾಡಿದ್ದಾರೆ.
ಜೀವನದಲ್ಲಿ ಸಾಲು ಸಾಲು ಸವಾಲು ಎದುರಿಸಿರುವ ಆಶಾ ಕಂದರ, ಕಠಿಣ ಪರಿಶ್ರಮ ಹಾಗೂ ಹೋರಾಟದ ಫಲವಾಗಿ ಇದೀಗ ರಾಜಸ್ಥಾನಲ್ಲಿನ ಕಠಿಣ ಪರೀಕ್ಷೆ ಪಾಸ್ ಮಾಡಿದ್ದಾರೆ. ಇದರ ಬಗ್ಗೆ ತಮ್ಮ ಮನದಾಳ ಈಟಿವಿ ಭಾರತ ಜೊತೆ ಹಂಚಿಕೊಂಡಿದ್ದಾರೆ.
ಕಸ ಗುಡಿಸುವ ಕೆಲಸ ಮಾಡ್ತಿದ್ದ ಮಹಿಳೆ ಜಿಲ್ಲಾಧಿಕಾರಿ ಜೋಧಪುರ ಮುನ್ಸಿಪಲ್ ಕಾರ್ಪೋರೇಶನ್ನಲ್ಲಿ ಕಸ ಗುಡಿಸುವ ಕೆಲಸ ಮಾಡ್ತಿದ್ದ ಆಶಾ ಸೇನೆ ಸೇರುವ ಕನಸು ಕಂಡಿದ್ದರು. ಆದರೆ ಈ ಕನಸು ಈಡೇರುವ ಮೊದಲೇ ಗಂಡನಿಂದ ವಿಚ್ಛೇದನ ಪಡೆದುಕೊಳ್ಳಬೇಕಾಗುತ್ತದೆ. ಹೀಗಾಗಿ ಇಬ್ಬರು ಮಕ್ಕಳನ್ನ ಸಾಕುವ ಜವಾಬ್ದಾರಿ ಹೊತ್ತುಕೊಳ್ಳಬೇಕಾಗುತ್ತದೆ. ಅನೇಕ ತೊಂದರೆ, ಸವಾಲುಗಳ ಮಧ್ಯೆ ಪದವಿ ವ್ಯಾಸಂಗ ಮುಗಿಸುತ್ತಾರೆ. ಕಳೆದ ಎರಡು ವರ್ಷಗಳ ಹಿಂದೆ ಅಂದರೆ 2018ರಲ್ಲಿ ರಾಜ್ಯ ಆಡಳಿತ ಸೇವಾ ಪರೀಕ್ಷೆ(ಆರ್ಎಎಸ್) ಎದುರಿಸಿದ್ದರು. ಇದಾದ ಬಳಿಕ 2019ರಲ್ಲಿ ಮೌಖಿಕ ಪರೀಕ್ಷೆ ಎದುರಿಸುತ್ತಾರೆ. ಇದರ ಫಲಿತಾಂಶ ಬರಲು ತಡವಾಗಿದ್ದರಿಂದ ಜೋಧಪುರ ಮುನ್ಸಿಪಾಲ್ ಕಾರ್ಪೋರೇಷನ್ನಲ್ಲಿ ಕಸ ಗುಡಿಸುವ ಕೆಲಸಕ್ಕೆ ಸೇರಿಕೊಳ್ಳುತ್ತಾರೆ.
ಇದನ್ನೂ ಓದಿರಿ: ವರುಣಾರ್ಭಟ: ಗೋಕರ್ಣದ ಮಹಾಬಲೇಶ್ವರನ ಗರ್ಭಗುಡಿಗೂ ನುಗ್ಗಿದ ನೀರು!
ಸತತ ಎರಡು ವರ್ಷಗಳ ಕಾಲ ಜೋಧಪುರದ ಬೀದಿಗಳಲ್ಲಿ ಕಸ ಗುಡಿಸುವ ಕೆಲಸ ಮಾಡಿರುವ ಆಶಾ, ಮನೆ ಜವಾಬ್ದಾರಿ ಹೊತ್ತುಕೊಳ್ಳುತ್ತಾರೆ. ಆದರೆ ಇದೀಗ ಜಿಲ್ಲಾಧಿಕಾರಿಯಾಗಿ ಆಯ್ಕೆಯಾಗಿದ್ದಾರೆ. 2018ರ ರಾಜಸ್ಥಾನ ಆಡಳಿತ ಸೇವಾ ಪರೀಕ್ಷೆ ಫಲಿತಾಂಶ ಕಳೆದ ಮಂಗಳವಾರ ಬಹಿರಂಗಗೊಂಡಿದ್ದು, ಮೊದಲ ಪ್ರಯತ್ನದಲ್ಲೇ ಪರೀಕ್ಷೆ ಪಾಸ್ ಮಾಡಿದ್ದಾರೆ. ಮುಂದಿನ ಕೆಲ ದಿನಗಳಲ್ಲಿ ಅವರು ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಆಶಾ ಇಬ್ಬರು ಮಕ್ಕಳ ತಾಯಿಯಾಗಿದ್ದು, ಸದ್ಯ ಮಗ ಪದವಿ ವ್ಯಾಸಂಗ ಮಾಡ್ತಿದ್ದು, ಮಗಳು ಐಐಟಿ ಜೆಇಇಗೆ ಅರ್ಹತೆ ಪಡೆದುಕೊಂಡಿದ್ದಾಳೆ.