ನವದೆಹಲಿಯಲ್ಲಿ ನಡೆದ 18 ನೇ ಜಿ -20 ಶೃಂಗಸಭೆಯು ಯಶಸ್ವಿಯಾಗಿ ಮುಕ್ತಾಯಗೊಂಡಿದೆ. ಪ್ರಧಾನಿ ನರೇಂದ್ರ ಮೋದಿ ಅವರು, ಜಿ20 ಶೃಂಗದ ಮುಂದಿನ ಅಧ್ಯಕ್ಷ ಬ್ರೆಜಿಲ್ ನ ಲೂಯಿಸ್ ಇಗ್ನಾಸಿಯೊ ಲುಲಾ ಡಾ ಸಿಲ್ವಾ ಅವರಿಗೆ ಅಧ್ಯಕ್ಷತೆಯ ದಂಡವನ್ನು ಹಸ್ತಾಂತರಿಸಿದರು. ಕಳೆದ ವರ್ಷ ನವೆಂಬರ್ ನಲ್ಲಿ ಇಂಡೋನೇಷ್ಯಾದಿಂದ ಭಾರತವು ಅಧ್ಯಕ್ಷತೆಯನ್ನು ವಹಿಸಿಕೊಂಡಾಗ ಎಲ್ಲಿ ನಾವು ವಿಫಲರಾಗುತ್ತೇವೆಯೋ ಎಂಬ ಆತಂಕ ಇದ್ದದ್ದಂತೂ ಸುಳ್ಳಲ್ಲ.
ರಷ್ಯಾ-ಉಕ್ರೇನ್ ಸಂಘರ್ಷವು ದಿನದಿಂದ ದಿನಕ್ಕೆ ತೀವ್ರಗೊಳ್ಳುತ್ತಿರುವುದರಿಂದ ಮತ್ತು ಎರಡೂ ದೇಶಗಳು ಮೇಲುಗೈ ಸಾಧಿಸಲು ಹೋರಾಡುತ್ತಿರುವ ಮಧ್ಯೆ ಶೃಂಗಸಭೆಯು ಯಾವುದೇ ಅಂತಿಮ ಘೋಷಣೆಯಿಲ್ಲದೇ ಕೊನೆಗೊಳ್ಳಬಹುದು ಎಂದು ಜಾಗತಿಕ ವಿಶ್ಲೇಷಕರು ಊಹಿಸಿದ್ದರು. ಇದರಿಂದಾಗಿ ಭಾರತದ ಅಧ್ಯಕ್ಷ ಸ್ಥಾನಕ್ಕೆ ಕಳಂಕ ಉಂಟಾಗಬಹುದು ಎಂಬ ಸಣ್ಣದೊಂದು ಆತಂಕ ಇದ್ದೇ ಇತ್ತು.
ರಷ್ಯಾ- ಉಕ್ರೇನ್ ಸಂಘರ್ಷದ ತೊಡಕು:ರಷ್ಯಾ ಮತ್ತು ಉಕ್ರೇನ್ ಸಂಘರ್ಷದ ಬಗ್ಗೆ ನ್ಯಾಟೋ ದೇಶಗಳು ಮತ್ತು ರಷ್ಯಾ-ಚೀನಾ ಗುಂಪಿನ ನಡುವಿನ ಗಂಭೀರ ಭಿನ್ನಾಭಿಪ್ರಾಯದಿಂದಾಗಿ ಜಿ -20 ವಿದೇಶಾಂಗ ಸಚಿವರ ಸಮ್ಮೇಳನವು ಯಾವುದೇ ಜಂಟಿ ಘೋಷಣೆಯನ್ನು ಹೊರಡಿಸಲು ವಿಫಲವಾದ ನಂತರ ಈ ಅನುಮಾನಗಳು ಹುಟ್ಟಿಕೊಂಡಿದ್ದವು. ಈ ವರ್ಷದ ಆರಂಭದಲ್ಲಿ ಶ್ರೀನಗರದಲ್ಲಿ ನಡೆದ ಜಿ -20 ಪ್ರವಾಸೋದ್ಯಮ ಸಭೆಯಲ್ಲಿ ಚೀನಾ, ಸೌದಿ ಅರೇಬಿಯಾ, ಈಜಿಪ್ಟ್ ಮತ್ತು ಯುಎಇ ಅನುಪಸ್ಥಿತಿಯಿಂದ ಇದು ಮತ್ತಷ್ಟು ಬಲಗೊಂಡಿತ್ತು.
ಒಮ್ಮತ ಮೂಡಿಸುವುದು ನಿಜಕ್ಕೂ ಕಠಿಣವೇ ಆಗಿತ್ತು:ಇದಲ್ಲದೇ, ಜಿ20ಯ ಅದರ ಸ್ಥಾಪಕ ದಾಖಲೆಗಳಲ್ಲಿ ಉಲ್ಲೇಖಿಸಿದಂತೆ ಗುಂಪಿನ ಆದೇಶ ಮತ್ತು ಉದ್ದೇಶವು ಸಂಪೂರ್ಣವಾಗಿ ಆರ್ಥಿಕವಾಗಿದ್ದರೂ, ಮಹಿಳಾ ಸಬಲೀಕರಣ, ನವೋದ್ಯಮಗಳು ಅಥವಾ ಭ್ರಷ್ಟಾಚಾರ ವಿರೋಧಿ ಈ ಮೂರೂ ವಿಚಾರಗಳ ಅಡಿಯಲ್ಲಿ ನಡೆದ ಪ್ರತಿಯೊಂದು ಕಾರ್ಯಕಾರಿ ಗುಂಪಿನ ಸಭೆಯ ಫಲಿತಾಂಶದ ದಾಖಲೆಗಳಲ್ಲಿ ರಷ್ಯಾ ಮತ್ತು ಉಕ್ರೇನ್ ಸಂಘರ್ಷವು ಸ್ಪಷ್ಟವಾಗಿ ಉಲ್ಲೇಖಿಸಲ್ಪಟ್ಟಿದೆ. ಪರಸ್ಪರ ಅಪನಂಬಿಕೆ, ಶೀತಲ ಸಮರದ ಮರಳುವಿಕೆ, ಆಫ್ರಿಕನ್ ರಾಷ್ಟ್ರಗಳ ನೈಸರ್ಗಿಕ ಸಂಪನ್ಮೂಲಗಳ ವಿವೇಚನೆಯಿಲ್ಲದ ಬಳಕೆಯ ಪರಿಣಾಮವಾಗಿ ಅವುಗಳ ಆರ್ಥಿಕ ಅಸಮಾನತೆ ಮತ್ತು ಉತ್ತರ-ದಕ್ಷಿಣ ವಿಭಜನೆಯಿಂದ ಪೀಡಿತವಾದ ಪ್ರಕ್ಷುಬ್ಧ ರಾಜಕೀಯ ವಿಚಾರಗಳಲ್ಲಿ ಒಮ್ಮತ ಮೂಡಿಸುವುದು ಜಿ -20 ಯ ಯಾವುದೇ ಅಧ್ಯಕ್ಷರಿಗೆ ನಿಜವಾಗಿಯೂ ಕಠಿಣ ಕೆಲಸವಾಗಿತ್ತು.
ಬುದ್ದಿವಂತಿಕೆಯಿಂದ ಆಯೋಜಿಸಿದ್ದ 230 ಸಭೆಗಳು:ಆದರೆ ಭಾರತವು "ದಕ್ಷಿಣದ ಧ್ವನಿ" ಎಂಬ ಶೀರ್ಷಿಕೆಯಡಿಯಲ್ಲಿ 125 ಅಭಿವೃದ್ಧಿಶೀಲ ಮತ್ತು ಕಡಿಮೆ ಅಭಿವೃದ್ಧಿ ಹೊಂದಿದ ದೇಶಗಳ ವರ್ಚುಯಲ್ ಸಭೆಯನ್ನು ಕರೆಯುವ ಮೂಲಕ ತನ್ನ ಅಧ್ಯಕ್ಷೀಯ ಅಧಿಕಾರಾವಧಿಯನ್ನು ಬುದ್ಧಿವಂತಿಕೆಯಿಂದ ಪ್ರಾರಂಭಿಸಿತು. ಈ ದೇಶಗಳ ಕಳವಳಗಳಿಗೆ ವೇದಿಕೆಯನ್ನು ಕಂಡುಕೊಳ್ಳುವ ಈ ರೀತಿಯ ಮೊದಲ ಸಭೆ ಇದಾಗಿತ್ತು. ಈ ಕಳವಳಗಳನ್ನು ವ್ಯಕ್ತಪಡಿಸುತ್ತ, ಭಾರತವು 60 ಕ್ಕೂ ಹೆಚ್ಚು ನಗರಗಳಲ್ಲಿ ಷರ್ಪಾ, ಹಣಕಾಸು ಮತ್ತು ಎನ್ಜಿಒಗಳ ಅಡಿಯಲ್ಲಿ 230 ಕ್ಕೂ ಹೆಚ್ಚು ಸಭೆಗಳನ್ನು ಆಯೋಜಿಸಿತು. ಇದರಲ್ಲಿ ಒಂದು ಲಕ್ಷಕ್ಕೂ ಹೆಚ್ಚು ವಿದೇಶಿ ಪ್ರತಿನಿಧಿಗಳು ಭಾಗವಹಿಸಿದ್ದರು, ಇದರಲ್ಲಿ ಶಿಕ್ಷಣ ತಜ್ಞರು, ತಂತ್ರಜ್ಞರು, ಉದ್ಯಮಿಗಳು, ವಿವಿಧ ಕ್ಷೇತ್ರಗಳ ಅಧಿಕಾರಿಗಳು, ಸಾಮಾಜಿಕ ಕಾರ್ಯಕರ್ತರು, ಅರ್ಥಶಾಸ್ತ್ರಜ್ಞರು, ಚಿಂತಕರು, ಎನ್ಜಿಒ ಮುಂತಾದವರು ಭಾಗಿಯಾಗಿದ್ದರು.
ಆದಾಗ್ಯೂ ಶೃಂಗಸಭೆಗೆ ಒಂದು ವಾರ ಮುಂಚಿನವರೆಗೂ ಎರಡೂ ಬಣಗಳು ಇನ್ನೂ ತಮ್ಮ ತಮ್ಮ ನಿಲುವುಗಳಿಗೆ ಗಟ್ಟಿಯಾಗಿ ಅಂಟಿಕೊಂಡಿದ್ದವು. ಇದು ಇಡೀ ಶೃಂಗಸಭೆಯನ್ನು ಹಳಿ ತಪ್ಪಿಸುವ ಸಾಧ್ಯತೆಯಿತ್ತು. ಯುಎನ್ ಚಾರ್ಟರ್ ಮತ್ತು ಅಂತರರಾಷ್ಟ್ರೀಯ ಕಾನೂನಿನ ನಿಬಂಧನೆಗಳನ್ನು ಸ್ಪಷ್ಟವಾಗಿ ಉಲ್ಲಂಘಿಸಿ ಉಕ್ರೇನ್ ಮೇಲೆ ರಷ್ಯಾ ನಡೆಸಿದ 'ಆಕ್ರಮಣ'ವನ್ನು ಖಂಡಿಸುವ ಪ್ಯಾರಾವನ್ನು ಸೇರಿಸಲು ಪಾಶ್ಚಿಮಾತ್ಯ ಬ್ಲಾಕ್ ಬದ್ದವಾಗಿದ್ದರೂ ಮತ್ತು ರಷ್ಯಾದಿಂದ ಪರಮಾಣು ಬೆದರಿಕೆಯ ಉಲ್ಲೇಖವನ್ನು ಬಯಸಿದ್ದರೂ, ಮತ್ತೊಂದು ಗುಂಪು ರಷ್ಯಾಗೆ ಅಪರಾಧಿ ಎಂದು ಹಣೆಪಟ್ಟಿ ಕಟ್ಟಲು ಸಿದ್ಧರಿರಲಿಲ್ಲ. ಅಲ್ಲದೇ 1945 ರಲ್ಲಿ ಹಿರೋಷಿಮಾ ಮತ್ತು ನಾಗಸಾಕಿಯ ಮೇಲೆ ಅಮೆರಿಕ ನಡೆಸಿದ ಪರಮಾಣು ಬಾಂಬ್ ದಾಳಿಯನ್ನು ಘೋಷಣೆಯಲ್ಲಿ ಸೇರಿಸಬೇಕೆಂದು ರಷ್ಯಾ-ಚೀನಾ ಗುಂಪು ಒತ್ತಾಯಿಸಿತ್ತು ಎಂದು ವರದಿಯಾಗಿದೆ.