ನವದೆಹಲಿ: ಸರ್ಕಾರಿ ಬಂಗಲೆಯನ್ನು ಆರು ವಾರಗಳಲ್ಲಿ ಆಸ್ತಿ ಅಧಿಕಾರಿಗಳಿಗೆ ಹಸ್ತಾಂತರಿಸುವಂತೆ ಬಿಜೆಪಿಯ ಮಾಜಿ ರಾಜ್ಯಸಭಾ ಸದಸ್ಯ ಸುಬ್ರಮಣಿಯನ್ ಸ್ವಾಮಿ ಅವರಿಗೆ ದೆಹಲಿ ಹೈಕೋರ್ಟ್ ಬುಧವಾರ ಆದೇಶಿಸಿದೆ.
ಭದ್ರತಾ ದೃಷ್ಟಿಯಿಂದ ಸರ್ಕಾರಿ ಬಂಗಲೆ ಮರು ಹಂಚಿಕೆ ಮಾಡುವಂತೆ ಸುಬ್ರಮಣಿಯನ್ ಸ್ವಾಮಿ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಲೇವಾರಿ ಸಂದರ್ಭದಲ್ಲಿ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು 2016ರಿಂದ ಈ ಬಂಗಲೆಯಲ್ಲಿ ಸುಬ್ರಮಣಿಯನ್ ಸ್ವಾಮಿ ವಾಸಿಸುತ್ತಿದ್ದಾರೆ. ಅವರಿಗೆ 5 ವರ್ಷಗಳ ಕಾಲ ಬಂಗಲೆ ಮಂಜೂರು ಮಾಡಲಾಗಿದ್ದು, ಅದರ ಅವಧಿ ಮುಗಿದಿದೆ. ಝಡ್ ಕೆಟಗರಿ ಭದ್ರತೆ ಹೊಂದಿರುವ ವ್ಯಕ್ತಿಗೆ ಸರ್ಕಾರಿ ವಸತಿಯನ್ನು ಕಡ್ಡಾಯಗೊಳಿಸಲು ನ್ಯಾಯಾಲಯಕ್ಕೆ ಯಾವುದೇ ಕಾರಣವಿಲ್ಲ ಎಂದು ಹೇಳಿದರು.
2016ರ ಜನವರಿಯಲ್ಲಿ ಸುಬ್ರಮಣಿಯನ್ ಸ್ವಾಮಿ ಅವರಿಗೆ ಕೇಂದ್ರ ಸರ್ಕಾರ 5 ವರ್ಷಗಳ ಕಾಲ ದೆಹಲಿಯಲ್ಲಿ ಬಂಗಲೆ ಮಂಜೂರು ಮಾಡಿತ್ತು. ರಾಜ್ಯಸಭೆಯ ಸಂಪೂರ್ಣ ಅವಧಿಯಲ್ಲೂ ಅವರು ಅಲ್ಲೇ ವಾಸವಿದ್ದರು. ಇದೇ ಏಪ್ರಿಲ್‌ನಲ್ಲಿ ಅವರ ಅಧಿಕಾರಾವಧಿ ಕೊನೆಗೊಂಡಿತ್ತು. ಹೀಗಾಗಿ ಅವರು ವಸತಿ ಬಂಗಲೆವನ್ನು ಖಾಲಿ ಮಾಡಬೇಕಾಗಿತ್ತು. ಆದರೆ, ಅವರು ನಿರಂತರ ಭದ್ರತಾ ಬೆದರಿಕೆಯನ್ನು ಗಮನದಲ್ಲಿಟ್ಟುಕೊಂಡು ಬಂಗಲೆಯನ್ನು ತನಗೆ ಮರುಹಂಚಿಕೆ ಮಾಡುವಂತೆ ಕೋರಿ ಹೈಕೋರ್ಟ್ ಮೊರೆ ಹೋಗಿದ್ದರು.