ಮುಂಬೈ:ಮಹಾರಾಷ್ಟ್ರ ಮಾಜಿ ಡಿಜಿಪಿ ಸುಬೋಧ್ ಕುಮಾರ್ ಜೈಸ್ವಾಲ್ ಅವರನ್ನು ಸಿಬಿಐ ನೂತನ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದ್ದು, ಇದು ರಾಜ್ಯದ ಅನೇಕ ನಾಯಕರಿಗೆ ತಲೆನೋವಾಗಿ ಪರಿಣಮಿಸಿದೆ. ಜೈಸ್ವಾಲ್ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಮುಂದುವರಿಯಲಿದ್ದಾರೆ.
ಮಹಾರಾಷ್ಟ್ರದ ಎಂವಿಎ (ಮಹಾ ವಿಕಾಸ್ ಅಘಾಡಿ) ಸರ್ಕಾರವು ಜೈಸ್ವಾಲ್ ಕೆಲಸ ರೀತಿಯಿಂದ ಸಂತೋಷವಾಗಿಲ್ಲ ಎಂದು ಹೇಳಲಾಗುತ್ತಿದೆ. ಆದ್ದರಿಂದ ಅವರನ್ನು ಕೇಂದ್ರಕ್ಕೆ ವರ್ಗಾಯಿಸಲಾಯಿತು. ಈಗ ಅವರು ಸಿಬಿಐ ಮುಖ್ಯಸ್ಥರಾಗಿ ನೇಮಕಗೊಂಡಿದ್ದರಿಂದ, ಎಂವಿಎ ಸರ್ಕಾರ ತೊಂದರೆಗೆ ಸಿಲುಕಬಹುದು ಎನ್ನಲಾಗ್ತಿದೆ.
ಪ್ರಸ್ತುತ ಸಿಬಿಐ ಮಹಾರಾಷ್ಟ್ರದಲ್ಲಿ ಕೆಲವು ನಿರ್ಣಾಯಕ ಪ್ರಕರಣಗಳನ್ನು ನಿರ್ವಹಿಸುತ್ತಿದೆ. ಅವುಗಳಲ್ಲಿ ಒಂದು ಸುಶಾಂತ್ ಸಿಂಗ್ ರಜಪೂತ್ ಅವರ ಆತ್ಮಹತ್ಯೆ. ಇತರ ವಿಷಯಗಳಲ್ಲಿ ಮಾಜಿ ಗೃಹ ಸಚಿವ ಅನಿಲ್ ದೇಶ್ಮುಖ್ ಮತ್ತು ಮುಂಬೈನ ಮಾಜಿ ಪೊಲೀಸ್ ಆಯುಕ್ತ ಪರಂಬೀರ್ ಸಿಂಗ್ ಪ್ರಕರಣ.
ಎಂವಿಎ ಸರ್ಕಾರದ ಕೆಲವು ನಾಯಕರನ್ನು ಇಡಿ ಮತ್ತು ಸಿಬಿಐ ತನಿಖೆ ನಡೆಸುತ್ತಿದೆ. ಈ ಪಟ್ಟಿಯಲ್ಲಿ ಶಿವಸೇನ ಶಾಸಕ ಪ್ರತಾಪ್ ಸರ್ನಾಯಕ್ ಮತ್ತು ಶಿವಸೇನ ಮಾಜಿ ಸಂಸದ ಆನಂದರಾವ್ ಸೇರಿದ್ದಾರೆ. ಎಂವಿಎ (Congress ಮತ್ತು NCP) ಯ ಇತರ ಪಕ್ಷಗಳ ಶಾಸಕರು ಮತ್ತು ಸಂಸದರು ಸಹ ಸಿಬಿಐನ ಕಣ್ಗಾವಲಿನಲ್ಲಿದ್ದಾರೆ ಎಂದು ಹೇಳಲಾಗುತ್ತಿದೆ. ಇದಲ್ಲದೇ, ಟ್ರೆಂಡಿಂಗ್ 'ಫೋನ್ ಟ್ಯಾಪಿಂಗ್' ವಿಷಯದ ವರದಿಯನ್ನು ಜೈಸ್ವಾಲ್ ಸಿಎಂಗೆ ಸಲ್ಲಿಸಿದ್ದಾರೆ.