ಕರ್ನಾಟಕ

karnataka

ETV Bharat / bharat

ನೇತಾಜಿ ಪುಣ್ಯಸ್ಮರಣೆ: ಇಂದಿಗೂ ಬಗೆಹರಿಯದ ಅಪ್ರತಿಮ ದೇಶಪ್ರೇಮಿಯ ಸಾವಿನ ಗೊಂದಲ

ಧೀಮಂತ ವ್ಯಕ್ತಿತ್ವದ ಸ್ವಾತಂತ್ರ್ಯ ಸೇನಾನಿ ನೇತಾಜಿ ಸುಭಾಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯನ್ನು ಆಗಸ್ಟ್ 18 ರಂದು ಆಚರಿಸಲಾಗುತ್ತಿದೆ. ಆದರೆ, ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಅವರ ಸಾವಿನ ಬಗ್ಗೆ ಇಂದಿಗೂ ಗೊಂದಲಗಳು ಮುಂದುವರೆದಿವೆ.

Subhash Chandra Bose Death Anniversary
ಸುಭಾಶ್ ಚಂದ್ರ ಬೋಸ್ ಪುಣ್ಯಸ್ಮರಣೆ

By

Published : Aug 18, 2021, 9:25 AM IST

ಆಗಸ್ಟ್ 18. ಅಪ್ರತಿಮ ದೇಶಪ್ರೇಮಿ ಸುಭಾಶ್ ಚಂದ್ರಬೋಸ್ ಅವರ ಪುಣ್ಯಸ್ಮರಣೆಯ ದಿನ. ಬ್ರಿಟಿಷರ ದಾಸ್ಯದ ಸಂಕೋಲೆಯಿಂದ ದೇಶವನ್ನು ಸ್ವತಂತ್ರಗೊಳಿಸಲು ಯುವಕರ ಸಂಘ ಕಟ್ಟಿಕೊಂಡು ಹೋರಾಡಿದ ಕೆಚ್ಚೆದೆಯ ವೀರ ಸುಭಾಶ್ ಚಂದ್ರ ಬೋಸ್.

ಬೋಸ್‌, ಪಶ್ಚಿಮ ಬಂಗಾಳದ ಶ್ರೀಮಂತ ಕುಟುಂಬದಲ್ಲಿ 1897ರಲ್ಲಿ ಜನಿಸಿದರು. ಸ್ವಾತಂತ್ರ್ಯ ಸಮರಕ್ಕೆ ಧುಮುಕಿ ಬ್ರಿಟಿಷರ ವಿರುದ್ಧ ಬಂಡೆದ್ದು ಜನಮಾನಸದಲ್ಲಿ ಪ್ರೀತಿಯ 'ನೇತಾಜಿ' ಅಂತಲೇ ಪ್ರಸಿದ್ದಿ ಪಡೆದರು.

ಉನ್ನತ ಶಿಕ್ಷಣ, ನಾಗರೀಕ ಸೇವೆ ಪರೀಕ್ಷೆ ಮತ್ತು ಸ್ವಾತಂತ್ರ್ಯ ಹೋರಾಟ

ಇಂಗ್ಲೆಂಡ್​ನ ಪ್ರಸಿದ್ದ ಕೇಂಬ್ರಿಡ್ಜ್ ವಿಶ್ವವಿದ್ಯಾನಿಲಯದಿಂದ ಪದವಿ ಪಡೆದ ನೇತಾಜಿ, ಬಳಿಕ ಭಾರತೀಯ ನಾಗರಿಕ ಸೇವೆಗೆ ಸಿದ್ಧರಾದರು. 1920ರಲ್ಲಿ ನಾಗರಿಕ ಸೇವಾ ಪರೀಕ್ಷೆಯನ್ನು ಪಾಸ್ ಮಾಡಿದರು. ಆದರೆ, 1921 ರಲ್ಲಿ ಭಾರತಕ್ಕೆ ಮರಳಿದ ಬೋಸ್‌ ತನ್ನ ಕೆಲಸಕ್ಕೆ ರಾಜೀನಾಮೆ ನೀಡಿ ಭಾರತ ಸ್ವಾತಂತ್ರ್ಯ ಹೋರಾಟಕ್ಕೆ ಅಣಿಯಾದರು.

ದೇಶಪ್ರೇಮದ ಕಿಚ್ಚು ಹೊತ್ತಿಸುತ್ತಿದ್ದ ಪ್ರಖರ ಮಾತುಗಳು:

ಭಾರತದ ಸ್ವಾತಂತ್ರ್ಯ ಸೇನಾನಿಗಳಲ್ಲಿ ಅತ್ಯಂತ ಗೌರವದ ವ್ಯಕ್ತಿತ್ವಗಳಲ್ಲಿ ನೇತಾಜಿ ಸುಭಾಶ್ ಚಂದ್ರ ಬೋಸ್ ಒಬ್ಬರು. ನೇತಾಜಿಯ ಒಂದೊಂದು ಮಾತುಗಳು ಮುತ್ತಿನಂತಿದ್ದು, ಯುವಜನರಲ್ಲಿ ದೇಶಪ್ರೇಮದ ಕಿಚ್ಚು ಹೊತ್ತಿಸಿ ಸ್ವಾತಂತ್ರ್ಯ ಹೋರಾಟಕ್ಕೆ ಧುಮುಕುವಂತೆ ಪ್ರೇರೇಪಿಸಿದ್ದವು.

'ತುಮ್ ಮುಜೇ ಖೂನ್ ದೋ, ತುಮ್ಹೆ ಆಝಾದಿ ದೂಗ'

ಸ್ವಾತಂತ್ರ್ಯ ಹೋರಾಟದ ಸಮಯದಲ್ಲಿ ನೇತಾಜಿ ಮೊಳಗಿಸಿದ್ದ "ತುಮ್ ಮುಜೇ ಖೂನ್ ದೋ, ತುಮ್ಹೆ ಆಝಾದಿ ದೂಗ" (ನೀವು ನನಗೆ ರಕ್ತ ಕೊಡಿ, ನಾನು ನಿಮಗೆ ಸ್ವಾತಂತ್ರ್ಯ ಕೊಡುತ್ತೇನೆ) ಎಂಬ ಘೋಷವಾಕ್ಯ ಇಂದಿಗೂ ಲಕ್ಷಾಂತರ ಯುವ ಜನರ ಮನದಲ್ಲಿ ಸ್ಪೂರ್ತಿಯನ್ನು ತುಂಬುತ್ತಿದೆ.

ಸ್ವಾತಂತ್ರ್ಯ ಹೋರಾಟ ಮತ್ತು ಸಾಮಾಜಿಕ ನೀತಿಗಳ ಸುಧಾರಣೆಗಾಗಿ ನೇತಾಜಿ ಸ್ಥಾಪಿಸಿದ 'ಆಝಾದಿ ಹಿಂದ್ ಫೌಜಿ' ಸಂಘಟನೆ ಅತ್ಯಂತ ಶಕ್ತಿ ಶಾಲಿಯಾಗಿತ್ತು. ಇಂತಹ ಮಹಾನ್ ನಾಯಕ ನೇತಾಜಿಯವರು 1945 ರ ಆಗಸ್ಟ್ 18 ರಂದು ಮೃತರಾದರು ಎಂದು ಹೇಳುತ್ತಿದ್ದರೂ, ಈ ಬಗ್ಗೆ ಇಂದಿಗೂ ಹಲವಾರು ಗೊಂದಲಗಳಿವೆ.

ವಿಮಾನ ಅಪಘಾತದಲ್ಲಿ ಮೃತ?

ಜಪಾನಿನ ಡೊಮೆ ಸುದ್ದಿ ಸಂಸ್ಥೆಯ ಪ್ರಕಾರ, ನೇತಾಜಿ ಆಗಸ್ಟ್ 18 ರಂದು ತೈಹೋಕು (ಈಗಿನ ತೈವಾನ್) ನಲ್ಲಿರುವ ಜಪಾನ್​ ನಿಯಂತ್ರಿತ ಮತ್ಸುಯಾಮ ಏರ್​ಬೇಸ್​ನಲ್ಲಿ ವಿಮಾನ ಅಪಘಾತದಲ್ಲಿ ಮೃತಪಟ್ಟರು. ಆದರೆ, ಈ ವಿಷಯವನ್ನು ಇಂದಿಗೂ ಭಾರತೀಯರು ಒಪ್ಪಲು ರೆಡಿ ಇಲ್ಲ. ಇದು ನೇತಾಜಿಯ ವಿರುದ್ದ ನಡೆದ ಪಿತೂರಿ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕವೂ ಹಲವಾರು ವರ್ಷಗಳ ಕಾಲ ಅವರು ಬದುಕಿದ್ದರು ಎಂಬುವುದು ಭಾರತೀಯರ ವಾದವಾಗಿದೆ.

ಗುಮ್ನಾಮಿ ಬಾಬಾ ಕಥೆ

ಗುಮ್ನಾಮಿ ಬಾಬಾ ಅವರ ವಿವಾದವು ನೇತಾಜಿಯ ಸುತ್ತಲೂ ಸುತ್ತುತ್ತಿತ್ತು. ಸಂತ ಪುರುಷ ಎಂದು ಕರೆಯಲ್ಪಡುವ ಗುಮ್ನಾಮಿ ಬಾಬಾ ಅವರು ಫೈಜಾಬಾದ್‌ನಲ್ಲಿ ( ಈಗಿನ ಅಯೋಧ್ಯೆ) 1960 ರಿಂದ 1987 ರವರೆಗೆ ಅವರು ಮೃತರಾಗುವವರಿಗೆ ವಾಸಿಸುತ್ತಿದ್ದರು.

ಗುಮ್ನಾಮಿ ಬಾಬಾ ಪ್ರತ್ಯೇಕವಾಗಿ ವಾಸಿಸುತ್ತಿದ್ದರು. ಹಾಗಾಗಿ, ಅವರೇ ನೇತಾಜಿ ಸುಭಾಷ್ ಚಂದ್ರ ಬೋಸ್ ಎಂದು ಹಲವು ಜನ ನಂಬಿದ್ದರು. ಇನ್ನೂ ಕೆಲವರು ನೇತಾಜಿ ವಿದೇಶದಲ್ಲಿ ಮರಣ ಹೊಂದಿದ್ದಾರೆ ಎಂದು ಹೇಳುತ್ತಿದ್ದರೂ, ಇಂದಿಗೂ ಈ ಗೊಂದಲಕ್ಕೆ ಪರಿಹಾರ ಸಿಕ್ಕಿಲ್ಲ. ದೇಶಕ್ಕೆ ಸ್ವಾತಂತ್ರ್ಯ ಬಂದು 75 ವರ್ಷಗಳಾದರೂ, ನೇತಾಜಿ ಮರಣದ ವಿಷಯ ಇಂದಿಗೂ ನಿಗೂಡವಾಗಿಯೇ ಇದೆ.

ಎಲ್ಲಾ ಗೊಂದಲಗಳ ಹೊರತಾಗಿಯೂ, ನೇತಾಜಿ ಸುಭಾಶ್ ಚಂದ್ರ ಬೋಸ್ ಇಂದಿಗೂ ಕೋಟ್ಯಾಂತರ ಭಾರತೀಯರ ಹೃದಯದಲ್ಲಿ ಜಾಗ ಪಡೆದಿದ್ದಾರೆ. ಪ್ರತಿ ವರ್ಷ ಆಗಸ್ಟ್ 18 ರಂದು ಸುಭಾಶ್ ಚಂದ್ರ ಬೋಸ್ ಅವರ ಪುಣ್ಯಸ್ಮರಣೆಯನ್ನು ಮಾಡಲಾಗುತ್ತದೆ.

ABOUT THE AUTHOR

...view details