ಅಯೋಧ್ಯೆ (ಉತ್ತರ ಪ್ರದೇಶ):ರಾಮಜನ್ಮಭೂಮಿ ಅಯೋಧ್ಯೆಯಲ್ಲಿ ಇದೇ ಜ. 22 ರಂದು ಶ್ರೀರಾಮನ ಮೂರ್ತಿ ಪ್ರಾಣ ಪ್ರತಿಷ್ಠಾಪನೆಗೆ ವಿಶ್ವವೇ ಕಾತರದಿಂದ ಕಾಯುತ್ತಿದೆ. ಮಂದಿರದ ನಿರ್ಮಾಣ ಮತ್ತು ನಿರ್ವಹಣೆ ಹೊಣೆ ಹೊತ್ತಿರುವ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ದೀಪದ ಬೆಳಕಿನಲ್ಲಿ ಹೊಳೆಯುತ್ತಿರುವ ಮಂದಿರದ ಕೆಲ ಚಿತ್ರಗಳನ್ನು ಹಂಚಿಕೊಂಡಿದೆ. ಇಲ್ಲಿನ ಜಟಾಯು ಪ್ರತಿಮೆ ವಿಹಂಗಮ ನೋಟ ನೋಡುಗರ ಕಣ್ಮನ ಸೆಳೆಯುತ್ತಿದೆ.
ರಾತ್ರಿಯ ವೇಳೆ ದೀಪದ ಬೆಳಕಿನಲ್ಲಿ ಮಂದಿರದ ಚಿತ್ರಗಳು ಮಿರಿ ಮಿರಿ ಹೊಳೆಯುತ್ತಿವೆ. ರಾಮಮಂದಿರ ಆವರಣದಲ್ಲಿರುವ ಕುಬೇರ ಕೋಟೆಯಲ್ಲಿ ಸ್ಥಾಪಿಸಲಾಗಿರುವ ಜಟಾಯುವಿನ ಪ್ರತಿಮೆ, ಸ್ತಂಭಗಳು, ಗೋಡೆಗಳು, ನವರಂಗ, ಅದರ ಮೇಲಿನ ಅತ್ಯಾಕರ್ಷಕ ಕೆತ್ತನೆಗಳು ನಿರ್ಮಾಣ ಕಾರ್ಯ ನಡೆಯುತ್ತಿರುವ ವೇಗವನ್ನು ಇವುಗಳು ತೋರಿಸುತ್ತವೆ. ದೇವಾಲಯದ ಒಳಗಿನ ಗರ್ಭಗುಡಿಯ ಚಿತ್ರಗಳು ರಾತ್ರಿಯ ಸಮಯದಲ್ಲಿ ರಾಮಮಂದಿರದ ಸೌಂದರ್ಯ ಮತ್ತು ಕಾಂತಿಯನ್ನು ತೋರಿಸುತ್ತವೆ. ದೀಪದ ಬೆಳಕು ದೇಗುಲದ ಆವರಣವನ್ನು ಬೆಳಗಿದೆ.
ರಾಮಂದಿರದ ವಿಶೇಷತೆಗಳು:ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಪ್ರಕಾರ, ಮಂದಿರವು ಮೂರು ಅಂತಸ್ತಿನ ದೇವಾಲಯವಾಗಿದ್ದು, ಪ್ರತಿ ಮಹಡಿಯು 20 ಅಡಿ ಎತ್ತರವಿದೆ. ಒಟ್ಟು 392 ಕಂಬಗಳು ಮತ್ತು 44 ಬಾಗಿಲುಗಳನ್ನು ಹೊಂದಿದೆ. ಗರ್ಭಗೃಹವು ದೇಗುಲದ ಅತ್ಯಾಕರ್ಷಕ ಸ್ಥಳವಾಗಿದೆ. ಅಲ್ಲಿ ಜನವರಿ 22 ರಂದು ರಾಮನನ್ನು ಪ್ರತಿಷ್ಠಾಪಿಸಲಾಗುತ್ತದೆ. ಮೊದಲ ಮಹಡಿಯಲ್ಲಿ ಶ್ರೀರಾಮ ದರ್ಬಾರ್ ಇದೆ. ದೇವಾಲಯವು ಐದು ಮಂಟಪಗಳನ್ನು ಒಳಗೊಂಡಿದೆ. ನೃತ್ಯ ಮಂಟಪ, ರಂಗ ಮಂಟಪ, ಸಭಾ ಮಂಟಪ, ಪ್ರಾರ್ಥನಾ ಮತ್ತು ಕೀರ್ತನ ಮಂಟಪ ಎಂದು ಹೆಸರಿಸಲಾಗಿದೆ.