ನವದೆಹಲಿ :ದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ವ್ಯಾಕ್ಸಿನ್ ಲಭ್ಯವಾದ ಬೆನ್ನಲ್ಲೇ ಸಿಹಿ ಸುದ್ದಿಯೊಂದು ಹೊರ ಬಿದ್ದಿದೆ. ಲಸಿಕೆ ಪಡೆದ ವ್ಯಕ್ತಿಗಳು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಶೇ.75-80ರಷ್ಟು ಕಡಿಮೆ ಎಂದು ಅಧ್ಯಯನಗಳು ತೋರಿಸುತ್ತಿವೆ. ಅಂತಹ ವ್ಯಕ್ತಿಗಳಿಗೆ ಆಮ್ಲಜನಕದ ಅಗತ್ಯವಿರುವ ಸಾಧ್ಯತೆ ಸುಮಾರು ಶೇ.8ರಷ್ಟು, ಲಸಿಕೆ ಹಾಕಿದ ವ್ಯಕ್ತಿಗಳಲ್ಲಿ ಐಸಿಯು ಅವಶ್ಯಕತೆ ಕೇವಲ ಶೇ.6ರಷ್ಟು ಮಾತ್ರ ಇದೆ ಎಂದು ನೀತಿ ಆಯೋಗದ ಆರೋಗ್ಯ ವಿಭಾಗದ ಸದಸ್ಯ ಡಾ.ವಿ ಕೆ ಪಾಲ್ ತಿಳಿಸಿದ್ದಾರೆ.
ಜಂಟಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, WHO-AIIMS ಸಮೀಕ್ಷೆಯಂತೆ 18 ವರ್ಷಕ್ಕಿಂತ ಕಡಿಮೆ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರಲ್ಲಿ ಸೆರೊಪೊಸಿಟಿವಿಟಿ ಬಹುತೇಕ ಸಮಾನವಾಗಿದೆ ಎಂದು ತೋರಿಸುತ್ತದೆ. 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ.67ರಷ್ಟು, 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಸಿರೊಪೊಸಿಟಿವಿಟಿ ದರ ಶೇ.59ರಷ್ಟಾಗಿದೆ. ನಗರ ಪ್ರದೇಶಗಳಲ್ಲಿ, ಇದು 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರಲ್ಲಿ ಶೇ.78ರಷ್ಟು ಮತ್ತು 18 ವರ್ಷಕ್ಕಿಂತ ಮೇಲ್ಪಟ್ಟವರಲ್ಲಿ ಶೇ. 79ರಷ್ಟು ಸಿರೊಪೊಸಿಟಿವಿಟಿ ದರ ಇದೆ ಎಂದ ಹೇಳಿದರು.