ಸಹರಾನ್‌ಪುರ (ಉತ್ತರಪ್ರದೇಶ): ಉತ್ತರಪ್ರದೇಶದ ಸಹರಾನ್‌ಪುರದ ಗಂಗೋಹ್ ಪಟ್ಟಣದಲ್ಲಿ ನಡೆದ ತಿರಂಗಾ ರ‍್ಯಾಲಿ ವೇಳೆ ಶಾಲಾ ಮಕ್ಕಳು 'ಪಾಕಿಸ್ತಾನ್ ಜಿಂದಾಬಾದ್' ಎಂಬ ಘೋಷಣೆ ಕೂಗಿರುವುದು ವಿವಾದಕ್ಕೆ ಕಾರಣವಾಗಿದೆ. ರಾಷ್ಟ್ರಧ್ವಜದ ಯಾತ್ರೆಯಲ್ಲಿ ವಿದ್ಯಾರ್ಥಿಗಳು ಘೋಷಣೆ ಕೂಗುತ್ತಿರುವ ವಿಡಿಯೋವನ್ನು ಕಾರಿನ ಪ್ರಯಾಣಿಕನೋರ್ವ ಸೆರೆಹಿಡಿದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಸಹರಾನ್‌ಪುರದ ಸಿಲ್ವರ್ ಓಕ್ ಪಬ್ಲಿಕ್ ಸ್ಕೂಲ್ ಹಾಗೂ ಸಹರಾನ್‌ಪುರದ ಗಂಗೋಹ್ ಪಟ್ಟಣದಲ್ಲಿ ಶನಿವಾರ ರಾಷ್ಟ್ರಧ್ವಜದ ಯಾತ್ರೆ ನಡೆದಿದೆ. ತಿರಂಗಾ ಯಾತ್ರೆಯಲ್ಲಿ ಸುಮಾರು 350 ಶಾಲಾ ಮಕ್ಕಳು ಕೈಯಲ್ಲಿ ತ್ರಿವರ್ಣ ಧ್ವಜ ಹಿಡಿದು ಘೋಷಣೆ ಕೂಗುತ್ತ ಸಾಗುತ್ತಿದ್ದರು. ಇದೇ ವೇಳೆ ಹಳದಿ ಅಂಗಿ ಧರಿಸಿದ್ದ ಕೆಲ ವಿದ್ಯಾರ್ಥಿಗಳು 'ಪಾಕಿಸ್ತಾನ್ ಜಿಂದಾಬಾದ್' ಎಂದು ಘೋಷಣೆ ಕೂಗುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ಈ ಸಂದರ್ಭದಲ್ಲಿ ಕಾರಿನಲ್ಲಿದ್ದ ಕೆಲ ಯುವಕರು ವಿದ್ಯಾರ್ಥಿಗಳನ್ನು ತರಾಟೆ ತೆಗೆದುಕೊಂಡಿದ್ದಾರೆ.