ಚಂಬಾ (ಹಿಮಾಚಲ ಪ್ರದೇಶ):ಪ್ರಧಾನಿ ನರೇಂದ್ರ ಮೋದಿಯವರು ದೇಶದಲ್ಲಿ ಸಾರ್ವಜನಿಕವಾಗಿ ವೈ-ಫೈ ಲಭ್ಯವಾಗಬೇಕು ಮತ್ತು ಡಿಜಿಟಲೀಕರಣ ಮಾಡಬೇಕು ಎಂದು ಪಣತೊಟ್ಟಿದ್ದಾರೆ. ಆದರೆ ಕೆಲ ಹಳ್ಳಿಗಳಲ್ಲಿ ಮಕ್ಕಳು ಮಾತ್ರ ಆನ್‌ಲೈನ್ ಕ್ಲಾಸ್ಗೆ ಹಾಜರಾಗಬೇಕೆಂದರೆ ಬೆಟ್ಟ- ಗುಡ್ಡಗಳನ್ನು ಹತ್ತುವ ಪರಿಸ್ಥಿತಿ ಇದೆ.
ಆನ್‌ಲೈನ್ ಕ್ಲಾಸ್ ಕೇಳಬೇಕೆಂದರೆ ಹತ್ತಬೇಕು ಬೆಟ್ಟ!
ಹಿಮಾಚಲ ಪ್ರದೇಶದ ಭರ್ಮೋರ್‌ನ ಬುಡಕಟ್ಟು ಭಾಗದ ಮಕ್ಕಳು ಗುಡ್ಡಗಳನ್ನು ಏರಿ ಅಲ್ಲಿ ಫೈರ್ ಕ್ಯಾಂಪ್‌ಗಳನ್ನು ನಿರ್ಮಿಸಿ ಆನ್‌ಲೈನ್ ತರಗತಿಯಲ್ಲಿ ಪಾಲ್ಗೊಳ್ಳಬೇಕಾದ ಪರಿಸ್ಥಿತಿ ಇದೆ.
ಕಳೆದ ಮಾರ್ಚ್‌ನಿಂದ ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಎಲ್ಲೆಡೆ ತಲ್ಲಣ ಮೂಡಿಸಿದೆ. ಈ ಹಿನ್ನೆಲೆಯಲ್ಲಿ ಮಕ್ಕಳ ಹಿತದೃಷ್ಟಿಯಿಂದ ಆನ್‌ಲೈನ್ ತರಗತಿಗಳನ್ನು ಮಾಡಲಾಗುತ್ತಿದೆ. ಈ ರೀತಿ ಆನ್‌ಲೈನ್ ತರಗತಿಯಲ್ಲಿ ಭಾಗವಹಿಸಬೇಕಾದರೆ ಇಂಟರ್ನೆಟ್ ಅಗತ್ಯ. ಆದರೆ ಹಿಮಾಚಲ ಪ್ರದೇಶದ ಕೆಲ ಹಳ್ಳಿಯ ಮಕ್ಕಳಿಗೆ ವೇಗವಾಗಿ ಇಂಟರ್ನೆಟ್ ಸೇವೆ ಲಭ್ಯವಾಗದ ಹಿನ್ನೆಲೆಯಲ್ಲಿ ಬೆಟ್ಟ ಹತ್ತಿ ಫೈರ್ ಕ್ಯಾಂಪ್ ನಿರ್ಮಿಸಿಕೊಂಡು ಚಳಿಗೆ ಮೈಯೊಡ್ಡಿ ತರಗತಿಯಲ್ಲಿ ಭಾಗವಹಿಸುತ್ತಾರೆ.
ಇನ್ನು ಗುಡ್ಡಗಾಡು ಪ್ರದೇಶವಾದ ಭರ್ಮೋರ್‌ನ ಬುಡಕಟ್ಟು ಭಾಗದ ಮಕ್ಕಳ ಪರಿಸ್ಥಿತಿಯೂ ಇದೇ ರೀತಿಯಿದೆ. ತೀವ್ರವಾಗಿ ಶೀತ ಪ್ರದೇಶವಾಗಿದ್ದು, ಇಲ್ಲಿನ ಮಕ್ಕಳು ಗುಡ್ಡಗಳನ್ನು ಏರಿ ಅಲ್ಲಿ ಫೈರ್ ಕ್ಯಾಂಪ್‌ಗಳನ್ನು ನಿರ್ಮಿಸಿ ಪಾಠ ಕೇಳುತ್ತಿದ್ದಾರೆ. ಇನ್ನು ಇಷ್ಟೆಲ್ಲಾ ಸಮಸ್ಯೆಗಳಿದ್ದರೂ ಯಾವೊಬ್ಬ ಅಧಿಕಾರಿಯಾಗಲಿ, ರಾಜಕೀಯ ಮುಖಂಡರಾಗಲಿ ಇತ್ತ ಮುಖ ಮಾಡಿಲ್ಲ. ಅನೇಕ ಬಾರಿ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲವಂತೆ.