ವಾರಾಣಸಿ (ಉತ್ತರ ಪ್ರದೇಶ):ಉತ್ತರ ಪ್ರದೇಶದ ವಾರಾಣಸಿಯ ಭಾರತೀಯ ತಂತ್ರಜ್ಞಾನ ಸಂಸ್ಥೆ (ಐಐಟಿ-ಬಿಎಚ್‌ಯು) ಕ್ಯಾಂಪಸ್‌ನಲ್ಲಿ ಬುಧವಾರ (ನವೆಂಬರ್ 1) ವಿದ್ಯಾರ್ಥಿನಿಯೊಬ್ಬಳಿಗೆ ಅಪರಿಚಿತ ವ್ಯಕ್ತಿಗಳು ಲೈಂಗಿಕ ಕಿರುಕುಳ ನೀಡಿದ ಘಟನೆ ಜರುಗಿದೆ. ಈ ಘಟನೆ ಬಗ್ಗೆ ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿ ಗುರುವಾರದಿಂದ ಪ್ರತಿಭಟನೆ ನಡೆಸುತ್ತಿದ್ದಾರೆ. ಇದರ ನಡುವೆ ಐಐಟಿ ಹಾಗೂ ಬನಾರಸ್ ಹಿಂದೂ ವಿಶ್ವವಿದ್ಯಾಲಯ ಕ್ಯಾಂಪಸ್ ನಡುವೆ ಗೋಡೆ ನಿರ್ಮಿಸಲು ಉದ್ದೇಶಿಸಲಾಗಿದೆ.
ಬುಧವಾರ ತಡರಾತ್ರಿ ವಿದ್ಯಾರ್ಥಿನಿಯೊಬ್ಬಳು ತನ್ನ ಸ್ನೇಹಿತರೊಂದಿಗೆ ಹಾಸ್ಟೆಲ್‌ನಿಂದ ಹೊರಗೆ ಹೋಗಿದ್ದಳು. ಈ ವೇಳೆ, ಬೈಕ್ನಲ್ಲಿ ಬಂದ ಮೂವರು ವ್ಯಕ್ತಿಗಳು, ವಿದ್ಯಾರ್ಥಿನಿಯನ್ನು ಬಲವಂತವಾಗಿ ಒಂದು ಮೂಲೆಗೆ ಎಳೆದೊಯ್ದು ಕಿರುಕುಳ ನೀಡಿದ್ದರು. ಈ ದುಷ್ಕರ್ಮಿಗಳು ಆಕೆಯ ಬಟ್ಟೆ ಬಿಚ್ಚಿಸಿ ವಿಡಿಯೋ ಮಾಡಿ ಫೋಟೋ ಕ್ಲಿಕ್ಕಿಸಿದ್ದಾನೆ. ಸುಮಾರು 15 ನಿಮಿಷಗಳ ಕಾಲ ಆಕೆಯನ್ನು ಹಿಡಿದುಕೊಂಡು ಆಕೆಯ ಫೋನ್ ಸಂಖ್ಯೆಯನ್ನು ತೆಗೆದುಕೊಂಡಿದ್ದಾರೆ ಎಂಬುವುದಾಗಿ ದೂರಿನಲ್ಲಿ ತಿಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಘಟನೆ ಖಂಡಿಸಿ ನೂರಾರು ವಿದ್ಯಾರ್ಥಿಗಳು ಪ್ರತಿಭಟನೆ ಕೈಗೊಂಡಿದ್ದಾರೆ. ಕ್ಯಾಂಪಸ್‌ಗೆ ಹೊರಗಿನವರು ಪ್ರವೇಶಿಸುವುದನ್ನು ನಿಷೇಧಿಸಬೇಕೆಂದು ಆಗ್ರಹಿಸಿದ್ದಾರೆ. ಸತತ 11 ಗಂಟೆಗಳ ಕಾಲ ಐಐಟಿ ಪ್ರತಿಭಟನಾ ಪ್ರದರ್ಶನ ಮುಂದುವರೆದಿತ್ತು. ಜಿಲ್ಲಾಡಳಿತದ ಮಧ್ಯಪ್ರವೇಶದ ನಂತರ ವಿದ್ಯಾರ್ಥಿಗಳು ತಮ್ಮ ಪ್ರತಿಭಟನೆ ಅಂತ್ಯಗೊಳಿಸಿದ್ದಾರೆ. ಈ ವೇಳೆ, ಐಐಟಿ ಬಿಎಚ್‌ಯು ಮತ್ತು ಬನಾರಸ್ ಹಿಂದೂ ವಿಶ್ವವಿದ್ಯಾಲಯದ ನಡುವೆ ಗೋಡೆ ನಿರ್ಮಿಸುವ ಬಗ್ಗೆ ಭರವಸೆಯನ್ನೂ ನೀಡಲಾಗಿದೆ. ಈ ವಿಷಯವು ವಿದ್ಯಾರ್ಥಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸಲಾಗಿದೆ.