ನವದೆಹಲಿ:ಏಕಕಾಲದಲ್ಲಿ ಒಂದೇ ವಿಶ್ವವಿದ್ಯಾಲಯ ಅಥವಾ ಬೇರೆ ಬೇರೆ ವಿಶ್ವವಿದ್ಯಾಲಯಗಳಿಂದ ಎರಡು ವಿಭಿನ್ನ ಪದವಿ ಕೋರ್ಸ್ ಕಲಿಯಲು ವಿಶ್ವವಿದ್ಯಾಲಯಗಳ ಧನಸಹಾಯ ಆಯೋಗ ಅವಕಾಶ ನೀಡಲಿದೆ. ಇದಕ್ಕೆ ಸಂಬಂಧಿಸಿದಂತೆ ಮುಂದಿನ ಕೆಲ ದಿನಗಳಲ್ಲಿ ಮಹತ್ವದ ಮಾರ್ಗಸೂಚಿ ಪ್ರಕಟಗೊಳ್ಳಲಿದೆ ಎಂದು ಯುಜಿಸಿ ಅಧ್ಯಕ್ಷ ಜಗದೀಶ್ ಕುಮಾರ್ ಮಾಹಿತಿ ನೀಡಿದ್ದಾರೆ.
ಇದಕ್ಕೆ ಸಂಬಂಧಿಸಿದಂತೆ ಸುದ್ದಿಗೋಷ್ಠಿಯಲ್ಲಿ ಭಾಗಿಯಾಗಿ ಮಾತನಾಡಿರುವ ಅವರು, ಹೊಸ ರಾಷ್ಟ್ರೀಯ ಶಿಕ್ಷಣ ನೀತಿಯ ಅಂಗವಾಗಿ ವಿದ್ಯಾರ್ಥಿಗಳು ಇನ್ಮುಂದೆ ಒಂದೇ ಬಾರಿ ಎರಡು ಪೂರ್ಣಾವಧಿಯ ಪದವಿ ಕೋರ್ಸ್ ಕಲಿಯಬಹುದಾಗಿದೆ ಎಂದಿದ್ದಾರೆ. ವಿದ್ಯಾರ್ಥಿಗಳು ಬಹುಮುಖ ಪ್ರತಿಭೆ ವೃದ್ಧಿ ಮಾಡಿಕೊಳ್ಳುವ ಉದ್ದೇಶದಿಂದ ಈ ಅವಕಾಶ ನೀಡಲಾಗುತ್ತಿದೆ ಎಂದು ತಿಳಿಸಿದ್ದು, ಭೌತಿಕ ಅಥವಾ ಆನ್ಲೈನ್ ಮೂಲಕ ಸಹ ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬಹುದಾಗಿದೆ.