ತಿರುವನಂತಪುರ(ಕೇರಳ): ಕೆಲ ವಿದ್ಯಾರ್ಥಿಗಳು ತಮ್ಮ ಸ್ನೇಹಿತೆಯ ವಾಸದ ಮನೆಯ ದಯನೀಯ ಸ್ಥಿತಿಯನ್ನು ಕಂಡು ನೋವು ಅನುಭವಿಸಿದ್ದಾರೆ. ಹೇಗಾದರೂ ಮಾಡಿ ಆಕೆಗೆ ಒಳ್ಳೆಯ ಮನೆ ಕಟ್ಟಿಕೊಡಬೇಕೆಂದು ನಿರ್ಧರಿಸಿದ್ದಾರೆ. ಅದರಂತೆ ಸ್ನೇಹಿತೆ ವಾಸವಿರುವ ಪ್ರದೇಶದಲ್ಲೇ 99 ದಿನಗಳಲ್ಲಿ ಮನೆಯೊಂದನ್ನು ಕಟ್ಟಿಕೊಟ್ಟಿದ್ದಾರೆ.
ಈ ಮನೆ ನಿರ್ಮಾಣಕ್ಕೆ ಚಂದಾ ವಸೂಲಿ ಮಾಡುವ ಬದಲು ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದರೊಂದಿಗೆ ಹಣ ಸಂಗ್ರಹಿಸಿದ್ದಾರೆ. ಸ್ನೇಹಿತರೆಲ್ಲರೂ ಸೇರಿ ವಾರಾಂತ್ಯದಲ್ಲಿ ಕಷ್ಟಪಟ್ಟು ಮನೆ ನಿರ್ಮಾಣ ಮಾಡಿದ್ದಾರೆ. ವಿದ್ಯಾರ್ಥಿನಿ ಅನಸ್ಯ ಅಜಯನ್‌ಗಾಗಿ ಅವಿರತವಾಗಿ ಶ್ರಮಿಸಿದ ತಿರುವನಂತಪುರದ ವಿಠುರ ಸರ್ಕಾರಿ ವೃತ್ತಿ ಶಿಕ್ಷಣ ಕಾಲೇಜಿನ ವಿದ್ಯಾರ್ಥಿಗಳು ಎಲ್ಲರ ಪ್ರಶಂಸೆ ಪಾತ್ರರಾಗಿದ್ದಾರೆ.
ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಮಾತು: ''ವಿದ್ಯಾರ್ಥಿನಿ ಅನಸ್ಯ ಅವರ ಮನೆ ಸುಸ್ಥಿತಿಯಲ್ಲಿಲ್ಲ, ಮನೆಯ ಮುಖ್ಯಸ್ಥರು (ಅನಸ್ಯ ತಂದೆ) ಮೃತರಾಗಿದ್ದಾರೆ. ಆ ಮನೆಯಲ್ಲಿ ಐವರು ಮಹಿಳೆಯರು ವಾಸವಿದ್ದಾರೆ. ಇವರ ದಯನೀಯ ಸ್ಥಿತಿ ನೋಡಿದ ಎನ್‌ಎಸ್‌ಎಸ್ ಸಂಸ್ಥೆಯು ಅವರಿಗೆ ಮನೆ ನಿರ್ಮಿಸಿಕೊಡಲು ನಿರ್ಧರಿಸಿದೆ. ಮನೆ ನಿರ್ಮಾಣ ಪೂರ್ಣಗೊಳಿಸಲು ವಿದ್ಯಾರ್ಥಿಗಳನ್ನು ಹುರಿದುಂಬಿಸಿದೆವು. 100 ದಿನಗಳ ಯೋಜನೆ ಹಾಕಿಕೊಳ್ಳಲಾಗಿತ್ತು. ಅದರಂತೆ ನಿಗದಿತ ಸಮಯದೊಳಗೆ ವಿದ್ಯಾರ್ಥಿಗಳು ಕೆಲಸ ಪೂರ್ಣಗೊಳಿಸಿದ್ದಾರೆ" ಎಂದು ಎನ್ಎಸ್ಎಸ್ ಕಾರ್ಯಕ್ರಮ ಅಧಿಕಾರಿ ಅರುಣ್ ತಿಳಿಸಿದರು.
ಪ್ರಾಧ್ಯಾಪಕರಿಂದ ಬೆಂಬಲ:ವಿದ್ಯಾರ್ಥಿಗಳು ರಾಷ್ಟ್ರೀಯ ಸೇವಾ ಯೋಜನೆಯಡಿ ಆಹಾರೋತ್ಸವ ಸೇರಿದಂತೆ ವಿವಿಧ ಕಾರ್ಯಕ್ರಮಗಳ ನಡೆಸಿ ಮನೆ ನಿರ್ಮಾಣಕ್ಕೆ ಹಣ ಸಂಗ್ರಹಿಸಿದರು. ಜೊತೆಗೆ ಹಲವು ವಸ್ತುಗಳ ಮಾರಾಟವೂ ನಡೆದಿದೆ. ಬಿಡುವಿಲ್ಲದೆ ದುಡಿದು ನಾಲ್ಕು ಲಕ್ಷ ರೂಪಾಯಿ ಸಂಗ್ರಹಿಸಿದರು. ಈ ವಿದ್ಯಾರ್ಥಿಗಳ ಪ್ರಯತ್ನಕ್ಕೆ ಕಾಲೇಜು ಪಿಟಿ ಮತ್ತು ಇತರ ಪ್ರಾಧ್ಯಾಪಕರು ಮನಃಪೂರ್ವಕವಾಗಿ ಬೆಂಬಲ ನೀಡಿದರು. ಸಂಗ್ರಹಿಸಿದ ನಾಲ್ಕು ಲಕ್ಷಕ್ಕೆ ಮತ್ತೆ ನಾಲ್ಕು ಲಕ್ಷ ರೂಪಾಯಿ ಠೇವಣಿ ಇರಿಸಿ ಮನೆ ಕಟ್ಟಲು ಆರಂಭಿಸಿದರು.