ಅಲಿಗಢ( ಉತ್ತರಪ್ರದೇಶ): ಜಿಲ್ಲೆಯ ಶಾಲೆಯೊಂದರಲ್ಲಿ 8ನೇ ತರಗತಿಯ ವಿದ್ಯಾರ್ಥಿಯೊಬ್ಬ ಎರಡನೇ ಮಹಡಿಯಿಂದ ಜಿಗಿದ ಘಟನೆ ನಡೆದಿದೆ. ಗಂಭೀರ ಸ್ಥಿತಿಯಲ್ಲಿರುವ ವಿದ್ಯಾರ್ಥಿಯನ್ನು ಜೆಎನ್ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಲಾಗಿದೆ. ಶಾಲೆಯ ಸಿಸಿಟಿವಿ ಕ್ಯಾಮೆರಾಗಳಲ್ಲಿ ವಿದ್ಯಾರ್ಥಿ ಜಿಗಿಯುತ್ತಿರುವ ದೃಶ್ಯ ಸೆರೆಯಾಗಿದೆ. ಹೋಂವರ್ಕ್ ಮಾಡದ ಕಾರಣ ಶಿಕ್ಷಕರ ಬೈಗುಳಕ್ಕೆ ಹೆದರಿ ವಿದ್ಯಾರ್ಥಿ ಹೀಗೆ ಮಾಡಿದ್ದಾನೆ ಎನ್ನಲಾಗಿದೆ. ಈ ಘಟನೆ ಬನ್ನಾದೇವಿ ಠಾಣೆ ವ್ಯಾಪ್ತಿಯ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.
ಪ್ರಕರಣದ ವಿವರ: ಗಭಾನ ನಿವಾಸಿ ಸಂಜೀವ್ ಕುಮಾರ್ ಸಿಂಗ್ ಎಂಬುವರು ಸುರಕ್ಷಾ ವಿಹಾರ್ ತ್ರಿಮೂರ್ತಿ ನಗರದಲ್ಲಿ ವಾಸಿಸುತ್ತಿದ್ದು, ಡೈರಿ ನಡೆಸುತ್ತಿದ್ದಾರೆ. ಅವರ ಏಕೈಕ ಪುತ್ರ 14 ವರ್ಷದ ಮಯಾಂಕ್ ಬನ್ನಾದೇವಿ ಪ್ರದೇಶದ ಶಾಲೆಯೊಂದರಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ಸಂಜೀವ್ ಕುಮಾರ್ ಶುಕ್ರವಾರ ಬೆಳಗ್ಗೆ ಮಯಾಂಕ್ ನನ್ನು ಶಾಲೆಗೆ ಬಿಟ್ಟಿದ್ದರು.
ಶಾಲೆಯ ಆಡಳಿತ ಮಂಡಳಿ ಪ್ರಕಾರ, ಶೂನ್ಯ ಅವಧಿಯಲ್ಲಿ ಉರ್ದು ಶಿಕ್ಷಕರು ತರಗತಿ ತೆಗೆದುಕೊಳ್ಳುತ್ತಿದ್ದರು. ಆಗ ಕಾಪಿ ಬುಕ್ ಪರಿಶೀಲನೆಯ ಸಮಯದಲ್ಲಿ ಮಯಾಂಕ್ನ ಹೋಂ ವರ್ಕ್ ಅಪೂರ್ಣವಾಗಿತ್ತು. ಹೀಗಾಗಿ ಹೋಂ ವರ್ಕ್ ಪೂರ್ಣಗೊಳಿಸುವಂತೆ ಹೇಳಲಾಗಿತ್ತು. ಆದರೆ, ಬರೆಯುವ ಕೆಲಸ ಮುಗಿಸುತ್ತಿದ್ದ ಮಯಾಂಕ್ ಥಟ್ಟನೆ ಕ್ಲಾಸ್ ನಿಂದ ಎದ್ದು ವೇಗವಾಗಿ ಹೊರಗೆ ಓಡಿ ಎರಡನೇ ಮಹಡಿಯಿಂದ ಜಿಗಿದಿದ್ದಾನೆ.
ತಲೆಕೆಳಗಾಗಿ ಮೇಲಿನಿಂದ ಬಿದ್ದ ಕಾರಣ ಆತನ ತಲೆಗೆ ಗಂಭೀರ ಗಾಯವಾಗಿದೆ. ಘಟನೆಯ ನಂತರ ಶಾಲೆಯಲ್ಲಿ ಭಾರಿ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು. ಕೂಡಲೇ ಮಯಾಂಕ್ನನ್ನು ಸಮೀಪದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತು. ಅಲ್ಲಿಂದ ಜೈನ್ ವೈದ್ಯಕೀಯ ಕಾಲೇಜಿಗೆ ಚಿಕಿತ್ಸೆಗಾಗಿ ಕಳುಹಿಸಲಾಯಿತು. ಅಷ್ಟರಲ್ಲಿ ಮಾಹಿತಿ ಪಡೆದ ಮಯಾಂಕ್ ತಂದೆ ಸಂಜೀವ್ ಕೂಡ ಆಗಮಿಸಿದ್ದರು. ಪೊಲೀಸರು ಕೂಡ ಸ್ಥಳಕ್ಕೆ ಆಗಮಿಸಿದ್ದರು.