ಕನೌಜ್(ಉತ್ತರ ಪ್ರದೇಶ): 10ನೇ ತರಗತಿ ಬೋರ್ಡ್ ಪರೀಕ್ಷೆಯಲ್ಲಿ ಪಾಸ್ ಆದ್ರೆ ಮೊಬೈಲ್ ಕೊಡಿಸುವುದಾಗಿ ಪೋಷಕರು ಭರವಸೆ ನೀಡಿದ್ದರಂತೆ. ಫಲಿತಾಂಶ ಪ್ರಕಟವಾಗಿ ಅನೇಕ ದಿನಗಳೇ ಕಳೆದಿದ್ದು, ಪೋಷಕರು ತಮ್ಮ ಮಗನಿಗೆ ಮೊಬೈಲ್ ಫೋನ್ ಕೊಡಿಸಿರಲಿಲ್ಲವಂತೆ. ಇಷ್ಟಕ್ಕೆ, ಮನನೊಂದಿರುವ ವಿದ್ಯಾರ್ಥಿ ಮನೆಯಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಾನೆ. ಉತ್ತರ ಪ್ರದೇಶದ ಕನೌಜ್ನಲ್ಲಿ ಈ ಪ್ರಕರಣ ಬೆಳಕಿಗೆ ಬಂದಿದೆ.
ಕನೌಜ್ನ ಇಂದರ್ಗಢ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ನಡೆದಿದೆ. ಪೋಷಕರು ಮೊಬೈಲ್ ಫೋನ್ ಕೊಡಿಸಲಿಲ್ಲ ಎಂಬ ಕಾರಣಕ್ಕಾಗಿ ಮನನೊಂದು ಬಾಲಕ ಈ ನಿರ್ಧಾರ ಕೈಗೊಂಡಿದ್ದಾಗಿ ತಿಳಿದುಬಂದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು, ಮೃತದೇಹವನ್ನ ಮರಣೋತ್ತರ ಪರೀಕ್ಷೆಗೋಸ್ಕರ ಆಸ್ಪತ್ರೆಗೆ ರವಾನಿಸಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ವಿದ್ಯಾರ್ಥಿ ಹೈಸ್ಕೂಲ್ ಬೋರ್ಡ್ ಪರೀಕ್ಷೆ ಬರೆದಿದ್ದನು. ಪರೀಕ್ಷೆಯಲ್ಲಿ ಪಾಸ್ ಆದ ಬಳಿಕ ಆತನಿಗೆ ಮೊಬೈಲ್ ಫೋನ್ ಕೊಡಿಸುವುದಾಗಿ ಕುಟುಂಬಸ್ಥರು ಮಾತನಾಡಿದ್ದರು. ರಿಸಲ್ಟ್ ಬಂದ ಬಳಿಕ ಆತ ಪಾಸ್ ಆಗಿದ್ದರೂ ತನಗೆ ಮೊಬೈಲ್ ಕೊಡಿಸಲಿಲ್ಲವೆಂದು ಮನೆಯಲ್ಲಿ ಯಾರೂ ಇಲ್ಲದ ವೇಳೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಇದನ್ನೂ ಓದಿ:ಆಪ್ ಸರ್ಕಾರದ ಆರೋಗ್ಯ ಸಚಿವ ಸತ್ಯೇಂದ್ರ ಜೈನ್ ನಿವಾಸದ ಮೇಲೆ ಇಡಿ ದಾಳಿ
ಭಾನುವಾರ ಸಂಜೆ ಈ ಘಟನೆ ನಡೆದಿದ್ದು, ಪೋಷಕರು ಹಸುಗಳಿಗೆ ನೀರು ಕುಡಿಸಲು ಬೇರೆ ಕಡೆ ಹೋಗಿದ್ದಾಗ ಮನೆಯಲ್ಲಿ ಸೀರೆಯಿಂದ ನೇಣು ಬಿಗಿದುಕೊಂಡು ಬಾಲಕ ಆತ್ಮಹತ್ಯೆಗೆ ಶರಣಾಗಿದ್ದಾನೆ. ಮಗನ ನಿರ್ಧಾರದಿಂದ ಪೋಷಕರು ಆಘಾತಕ್ಕೊಳಗಾಗಿದ್ದಾರೆ. ಆರು ಸಹೋದರರ ಪೈಕಿ ಮೃತ ಬಾಲಕ ನಾಲ್ಕನೇಯವನೆಂದು ತಿಳಿದು ಬಂದಿದೆ. ಆತನ ಇಬ್ಬರು ಸಹೋದರರು ದೆಹಲಿಯ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡ್ತಿದ್ದು, ತಂದೆ ಕೃಷಿಕರಾಗಿದ್ದಾರೆ.