ಬಾರ್ಮರ್(ರಾಜಸ್ಥಾನ): ವಿದ್ಯಾರ್ಥಿಗಳ ಮೇಲೆ ಶಿಕ್ಷಕರ ಹಲ್ಲೆ ಪ್ರಕರಣ ಮೇಲಿಂದ ಮೇಲೆ ವರದಿಯಾಗ್ತಿದ್ದು, ಸದ್ಯ ಅಂತಹದೊಂದು ಘಟನೆ ರಾಜಸ್ಥಾನದಲ್ಲಿ ನಡೆದಿದೆ. ಶಾಲೆಯಲ್ಲಿ ನಡೆದ ಪರೀಕ್ಷೆಯಲ್ಲಿ ಉತ್ತರ ಪತ್ರಿಕೆಯನ್ನು ತಡವಾಗಿ ಸಲ್ಲಿಸಿದ್ದಕ್ಕಾಗಿ ಶಿಕ್ಷಕರೊಬ್ಬರು ವಿದ್ಯಾರ್ಥಿಯನ್ನು ಥಳಿಸಿದ್ದಾರೆ.
ಅಪ್ರಾಪ್ತ ವಯಸ್ಕನ ಮೇಲೆ ಶಿಕ್ಷಕರು ಹಲ್ಲೆ ನಡೆಸಿರುವ ಕಾರಣ ಆತ ಪ್ರಜ್ಞಾಹೀನ ಸ್ಥಿತಿ ತಲುಪಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ರಾಜಸ್ಥಾನದ ಬಾರ್ಮರ್ನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಸಂಖ್ಯೆ 4ರಲ್ಲಿ ಈ ಘಟನೆ ನಡೆದಿದೆ. ಎಂಟನೇ ತರಗತಿಯ ವಿದ್ಯಾರ್ಥಿ ಕೃಷ್ಣ ಕುನಾಲ್ ಪ್ರಜ್ಞಾಹೀನ ಸ್ಥಿತಿಯಲ್ಲಿ ಆಸ್ಪತ್ರೆಗೆ ದಾಖಲಾಗಿದ್ದಾನೆ.
ಇದನ್ನೂ ಓದಿ:ವಿದ್ಯಾರ್ಥಿಗೆ ಶೂಗಳಿಂದ ಥಳಿಸಿದ ಶಿಕ್ಷಕ: ಪ್ರಕರಣ ದಾಖಲು
ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಘಟನೆಗೆ ಸಂಬಂಧಿಸಿದಂತೆ ಪ್ರಕರಣ ದಾಖಲಾಗಿದ್ದು, ಈಗಾಗಲೇ ತನಿಖೆ ನಡೆಸಲಾಗ್ತಿದೆ ಎಂದು ಅಧಿಕಾರಿ ಗಂಗಾರಾಮ್ ತಿಳಿಸಿದ್ದಾರೆ. ಘಟನೆ ಬಗ್ಗೆ ಮಾತನಾಡಿರುವ ಸಂತ್ರಸ್ತ ಬಾಲಕನ ತಾಯಿ 20 ವಿದ್ಯಾರ್ಥಿಗಳು ಸೇರಿಕೊಂಡು ಕುನಾಲ್ಗೆ ಆಸ್ಪತ್ರೆಗೆ ಹೊತ್ತೊಯ್ದಿದ್ದಾರೆಂದು ತಿಳಿಸಿದ್ದಾರೆ.ಬಾಲಕನಿಗೆ ಥಳಿಸಿದ ಆರೋಪದ ಮೇಲೆ ಶಿಕ್ಷಕ ಅಶೋಕ್ ಮಾಳಿಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಸದ್ಯ ಬಾಲಕ ಚೇತರಿಸಿಕೊಳ್ಳುತ್ತಿದ್ದಾನೆ ಎಂದು ಆಸ್ಪತ್ರೆ ಮಾಹಿತಿ ನೀಡಿದೆ. ಇತ್ತೀಚೆಗಷ್ಟೇ ರಾಜಸ್ಥಾನದಲ್ಲಿ ದಲಿತ ಬಾಲಕನೊಬ್ಬನಿಗೆ ಶಿಕ್ಷಕ ಹೊಡೆದಿದ್ದರಿಂದ ಸಾವನ್ನಪ್ಪಿರುವ ಘಟನೆ ನಡೆದಿತ್ತು.