ನವದೆಹಲಿ:''ಅರಬ್ಬಿ ಸಮುದ್ರದಲ್ಲಿ ವ್ಯಾಪಾರಿ ನೌಕೆ ಎಂವಿ ಕೆಮ್ ಪ್ಲುಟೊ ಮೇಲೆ ಇತ್ತೀಚೆಗೆ ನಡೆದ ದಾಳಿಯ ಬಗ್ಗೆ ಭಾರತೀಯ ನೌಕಾಪಡೆಯ ಪ್ರಾಥಮಿಕ ವಿಶ್ಲೇಷಣೆ ಮಾಡಿದೆ. ಇದು ಡ್ರೋನ್ ದಾಳಿಯ ಬಲವಾದ ಸಾಧ್ಯತೆಯನ್ನು ಸೂಚಿಸಿದೆ'' ಎಂದು ಭಾರತೀಯ ನೌಕಾಪಡೆ ತಿಳಿಸಿದೆ.
ನೌಕಾಪಡೆಯ ಮುಖ್ಯಸ್ಥ ಅಡ್ಮಿರಲ್ ಆರ್ ಹರಿ ಕುಮಾರ್ ಅವರು ಮಂಗಳವಾರ, ಭಾರತೀಯ ನೌಕಾಪಡೆಯ ಸ್ಫೋಟಕ ಆರ್ಡನೆನ್ಸ್ ಡಿಸ್ಪೋಸಲ್ ತಂಡವು ಕೈಗೊಂಡ ಆರಂಭಿಕ ವಿಶ್ಲೇಷಣೆ ಹಾಗೂ ಮುಂದಿನ ಕ್ರಮಗಳ ಕುರಿತು ಭಾರತೀಯ ನೌಕಾಪಡೆಯ ಹೇಳಿಕೆಯ ಪ್ರಕಾರ ಮಾಹಿತಿ ನೀಡಿದರು. ಆಂತರಿಕ ಮತ್ತು ದೃಶ್ಯ ಪರೀಕ್ಷೆಯ ಆಧಾರದ ಮೇಲೆ ತನಿಖೆ ನಡೆದಿದೆ. ಡ್ರೋನ್‌ನಿಂದ ಎಂವಿ ಕೆಮ್ ಪ್ಲುಟೊ ಮೇಲೆ ಸ್ಫೋಟ ಮಾಡಲಾಗಿದೆ. ಇದರಿಂದ ನೌಕೆಯ ವಾಟರ್‌ಲೈನ್‌ನ ಮೇಲೆ ವ್ಯಾಪಕವಾದ ಹಾನಿ ಉಂಟಾಗಿದೆ. ಇತರ ತನಿಖಾ ಸಂಸ್ಥೆಗಳ ಸಮನ್ವಯದಲ್ಲಿ ಹೆಚ್ಚಿನ ವಿಧಿವಿಜ್ಞಾನ ವಿಶ್ಲೇಷಣೆಗಾಗಿ ಭಾರತೀಯ ನೌಕಾಪಡೆಯು ಸ್ಪೋಟಕಗಳ ಅವಶೇಷಗಳನ್ನು ಸಂಗ್ರಹಿಸಿದೆ ಎಂದು ತಿಳಿಸಿದೆ.
ಭಾರತೀಯ ಕೋಸ್ಟ್ ಗಾರ್ಡ್ ಹೇಳಿಕೆ:20 ಭಾರತೀಯ ಮತ್ತು ಒಬ್ಬ ವಿಯೆಟ್ನಾಂ ಸಿಬ್ಬಂದಿ ಇದ್ದ ಎಂವಿ ಕೆಮ್ ಪ್ಲುಟೊ ನೌಕೆಯ ಮೇಲೆ ಶಂಕಿತ ಡ್ರೋನ್‌ನಿಂದ ಶನಿವಾರ ದಾಳಿ ನಡೆದಿದೆ ಎಂದು ಭಾರತೀಯ ಕೋಸ್ಟ್ ಗಾರ್ಡ್ (ಐಸಿಜಿ) ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ. ವ್ಯಾಪಾರಿ ಹಡಗು ಡಿಸೆಂಬರ್ 19 ರಂದು ಯುಎಇಯಿಂದ ತನ್ನ ಪ್ರಯಾಣವನ್ನು ಪ್ರಾರಂಭಿಸಿತ್ತು. ಡಿಸೆಂಬರ್ 25ರಂದು ಹೊಸ ಮಂಗಳೂರು ಬಂದರಿಗೆ ಬಂದಿತ್ತು. ಇನ್ನು ಮುಂಬೈನಲ್ಲಿರುವ ಇಂಡಿಯನ್ ಕೋಸ್ಟ್ ಗಾರ್ಡ್ ಮಾರಿಟೈಮ್ ಪಾರುಗಾಣಿಕಾ ಸಮನ್ವಯ ಕೇಂದ್ರವು ಶಂಕಿತ ಡ್ರೋನ್ ಸ್ಟ್ರೈಕ್ ಅಥವಾ ವೈಮಾನಿಕ ವೇದಿಕೆಯಿಂದ ದಾಳಿಗೊಳಗಾದ ಎಂವಿ ಕೆಮ್ ಪ್ಲುಟೊದಲ್ಲಿ ಸ್ಫೋಟದ ಬಗ್ಗೆ ಮಾಹಿತಿ ಪಡೆದುಕೊಂಡಿದೆ. ಯಾವುದೇ ಜೀವಹಾನಿಯಾಗಿಲ್ಲ ಎಂದು ಖಚಿತಪಡಿಸಿತು. ಜೊತೆಗೆ ಎಲ್ಲ ಸಹಾಯವನ್ನು ಒದಗಿಸುವ ಭರವಸೆ ನೀಡಲಾಗಿದೆ ಎಂದು ಹೇಳಿದೆ.
ದಾಳಿಯ ಪ್ರಕಾರ, ಸ್ವರೂಪದ ಪ್ರಾಥಮಿಕ ಮೌಲ್ಯಮಾಪನ:ಹಡಗಿನ ಬೆಂಕಿಯನ್ನು ಸಿಬ್ಬಂದಿ ನಂದಿಸಿದ್ದಾರೆ. ಹಡಗಿನ ಸುರಕ್ಷತೆಯನ್ನು ಹೆಚ್ಚಿಸಲು, ಎಂಆರ್ಸಿಸಿ ಮುಂಬೈ ಇಂಟರ್ನ್ಯಾಷನಲ್ ಸೇಫ್ಟಿ ನೆಟ್ (ISN) ಅನ್ನು ಸಕ್ರಿಯಗೊಳಿಸಿದೆ. ಸಹಾಯಕ್ಕಾಗಿ ಸುತ್ತಮುತ್ತಲಿನ ಇತರ ವ್ಯಾಪಾರಿ ಹಡಗುಗಳನ್ನು ತಕ್ಷಣವೇ ಕೆಮ್ ಪ್ಲುಟೊ ನೌಕೆಯತ್ತ ತಿರುಗಿಸಲಾಯಿತು. ಸೋಮವಾರ ಮಧ್ಯಾಹ್ನ ಈ ಹಡಗು ಮುಂಬೈ ತಲುಪಿತು. ಮುಂಬೈನ ಔಟರ್ ಆಂಕಾರೇಜ್ನಲ್ಲಿ ಸುರಕ್ಷಿತವಾಗಿ ನಿಲ್ಲಿಸಲಾಯಿತು. ನೌಕೆಯ ಆಗಮನದ ನಂತರ, ಭಾರತೀಯ ನೌಕಾಪಡೆಯ ಸ್ಫೋಟಕ ಆರ್ಡನೆನ್ಸ್ ವಿಲೇವಾರಿ ತಂಡವು ದಾಳಿಯ ಪ್ರಕಾರ ಮತ್ತು ಸ್ವರೂಪದ ಪ್ರಾಥಮಿಕ ಮೌಲ್ಯಮಾಪನವನ್ನು ಮಾಡಲು ಹಡಗನ್ನು ಪರಿಶೀಲಿಸಿತು.