ಉತ್ತರಪ್ರದೇಶದ 50 ಜಿಲ್ಲೆಗಳಲ್ಲಿ ನಡುಗಿದ ಭೂಮಿ ಲಖನೌ (ಉತ್ತರಪ್ರದೇಶ):ರಾಜಧಾನಿ ಲಖನೌ ಸೇರಿದಂತೆ ಅನೇಕ ಜಿಲ್ಲೆಗಳಲ್ಲಿ ಅಕ್ಟೋಬರ್ 3ರ ಮಧ್ಯಾಹ್ನ 2:53 ರ ಸುಮಾರಿಗೆ ಭೂಕಂಪ ಸಂಭವಿಸಿತ್ತು. ಇದಾದ ಬರೋಬ್ಬರಿ ಒಂದು ತಿಂಗಳ ನಂತರ ಅಂದ್ರೆ ನವೆಂಬರ್ 3ರ ರಾತ್ರಿ 11:32 ರ ಸುಮಾರಿಗೆ ರಾಜಧಾನಿ ಲಖನೌ ಸೇರಿದಂತೆ 50 ಜಿಲ್ಲೆಗಳಲ್ಲಿ ಮತ್ತೊಮ್ಮೆ ಭೂಕಂಪನದ ಅನುಭವವಾಗಿದೆ. ಈ ಭೂಕಂಪದ ಕೇಂದ್ರಬಿಂದು ನೇಪಾಳದಲ್ಲಿದ್ದು, ಭೂಮಿಯ 10 ಕಿಲೋಮೀಟರ್ ಆಳದಲ್ಲಿ ಕಂಡು ಬಂದಿದೆ.
ಭೂಕಂಪನದಿಂದಾಗಿ ರಾಜಧಾನಿ ಲಖನೌ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಲ್ಲಿ ಸಾಕಷ್ಟು ಭೀತಿ ಉಂಟಾಗಿದೆ. ಕಂಪನದ ಅನುಭವವಾದ ನಂತರ ನಾಗರಿಕರು ಮನೆಯಿಂದ ಹೊರ ಓಡಿಬಂದಿದ್ದಾರೆ. ಕಠ್ಮಂಡುವಿನಲ್ಲಿ ಸಂಭವಿಸಿದ ಭೂಕಂಪದ ತೀವ್ರತೆಯನ್ನು ರಿಕ್ಟರ್ ಮಾಪಕದಲ್ಲಿ 6.4 ಎಂದು ಅಳೆಯಲಾಗಿದೆ. ಲಖನೌ, ಲಖಿಂಪುರ, ಸೀತಾಪುರ, ಬರೇಲಿ, ಮೀರತ್, ಹರ್ದೋಯಿ, ಗೋರಖ್‌ಪುರ, ಜೌನ್‌ಪುರ ಸೇರಿದಂತೆ 50ಕ್ಕೂ ಹೆಚ್ಚು ಜಿಲ್ಲೆಗಳಲ್ಲಿ ಭೂಕಂಪನದ ಅನುಭವವಾಗಿದೆ.
ಹಿಮಾಲಯ ಪ್ರದೇಶದಲ್ಲಿ ಈ ಭೂಕಂಪ ಸಂಭವಿಸಿದೆ. ಹಿಮಾಲಯನ್ ಫ್ರಂಟಲ್ ಥ್ರಸ್ಟ್ (HFT) ಮತ್ತು ಮೇನ್ ಬೌಂಡರಿ ಥ್ರಸ್ಟ್ (MBT) ನಡುವೆ ಈ ಭೂಕಂಪ ಸಂಭವಿಸಿದೆ. ಈ ಭೂಕಂಪದ ಕೇಂದ್ರಬಿಂದುವು ಭೂಮಿಯಿಂದ 10 ಕಿಲೋಮೀಟರ್ ಆಳದಲ್ಲಿರುವುದರಿಂದ ಅದರ ತೀವ್ರತೆಯನ್ನು ಹೆಚ್ಚು ಅನುಭವಿಸಬೆಕಾಗಿದೆ. ಹೀಗಾಗಿ ಭೂಕಂಪನದ ಆಘಾತ ಪಾಟ್ನಾದವರೆಗೂ ಅನುಭವಿಸಿತು ಎಂದು ಲಖನೌ ವಿಶ್ವವಿದ್ಯಾಲಯದ ಭೂವಿಜ್ಞಾನ ವಿಭಾಗದ ಪ್ರಾಧ್ಯಾಪಕ ಅಜಯ್ ಆರ್ಯ ಮಾಹಿತಿ ನೀಡಿದ್ದಾರೆ.
ಭೂಕಂಪ ಸಂಭವಿಸಿದ ಕೇವಲ 24 ಗಂಟೆಗಳ ಹಿಂದೆ ಅಂದ್ರೆ ನವೆಂಬರ್ 2 ರ ಸಂಜೆ ನೇಪಾಳದಲ್ಲಿ ರಿಕ್ಟರ್ ಮಾಪಕದಲ್ಲಿ 3.9 ತೀವ್ರತೆಯ ಭೂಕಂಪ ಸಂಭವಿಸಿದೆ. ಈ ಭೂಕಂಪವು ಭೂಮಿಯಿಂದ ಹೆಚ್ಚು ಆಳದಲ್ಲಿ ಸಂಭವಿಸಿಲ್ಲ. ಅಂತಹ ಭೂಕಂಪಗಳನ್ನು ಭೂವಿಜ್ಞಾನದ ಭಾಷೆಯಲ್ಲಿ ಬಹಳ ಅಪಾಯಕಾರಿ ಎಂದು ಪರಿಗಣಿಸಲಾಗುತ್ತದೆ. ಕಳೆದ ಒಂದು ತಿಂಗಳಲ್ಲಿ ಹಿಮಾಲಯ ಪ್ರದೇಶದಲ್ಲಿ ಇದು ಸತತ ಮೂರನೇ ಭೂಕಂಪವಾಗಿದೆ ಎಂದು ಪ್ರೊಫೆಸರ್ ಆರ್ಯ ಹೇಳಿದ್ದಾರೆ.
ನೇಪಾಳದಿಂದ ಭಾರತದ ಕಡೆಗೆ ಇರುವ ಬಯಲು ಪ್ರದೇಶವನ್ನು ಹಿಮಾಲಯನ್ ಫ್ರಂಟಲ್ ಥ್ರಸ್ಟ್ ಎಂದು ಕರೆಯಲಾಗುತ್ತದೆ. ಇದು ಸಾಮಾನ್ಯವಾಗಿ ಮರಳು ಮತ್ತು ಕಲ್ಲಿನಿಂದ ಕೂಡಿರುತ್ತದೆ. ಇದು ಗಂಗಾ ಬಯಲಿನಲ್ಲಿದೆ. ನೇಪಾಳದ ಭಾಗದಲ್ಲಿರುವ ಭೂಗತ ಭೂಮಿಯನ್ನು ಮೇನ್ ಬೌಂಡರಿ ಥ್ರಸ್ಟ್ ಎಂದು ಕರೆಯಲಾಗುತ್ತದೆ. ಇದು ಮೂಲಭೂತವಾಗಿ ಘನ ಕಲ್ಲುಗಳಿಂದ ಕೂಡಿದೆ. ಈ ಭೂಕಂಪವು ಇನ್ನೂ ಕೆಲವು ಸೆಕೆಂಡುಗಳ ಕಾಲ ಇದ್ದಿದ್ದರೆ ಎರಡೂ ಕಡೆಗಳಲ್ಲಿ ಸಾಕಷ್ಟು ನಷ್ಟ ಸಂಭವಿಸುತ್ತಿತ್ತು ಎಂಬುದು ಪ್ರೊಫೆಸರ್ ಅವರ ಅಭಿಪ್ರಾಯವಾಗಿದೆ.
ಮುಂದಿನ 48 ಗಂಟೆಗಳ ಕಾಲ ಎಚ್ಚರವಾಗಿರಲು ಸಲಹೆ:ಸೆಪ್ಟೆಂಬರ್ 27, 2023 ರಿಂದ ದೇಶ ಮತ್ತು ಪ್ರಪಂಚದ ವಿವಿಧ ಭಾಗಗಳಲ್ಲಿ ಭೂಕಂಪದ ಕಂಪನಗಳು ನಿರಂತರವಾಗಿ ಸಂಭವಿಸುತ್ತಿವೆ. ಇದರ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 2 ರಿಂದ 5.5 ರಷ್ಟಿದೆ. ಕಳೆದ ಕೆಲವು ತಿಂಗಳುಗಳಲ್ಲಿ, ನೇಪಾಳ, ಜಪಾನ್, ಪಪುವಾ ನ್ಯೂಗಿನಿಯಾ, ಇಂಡೋನೇಷ್ಯಾ, ಚಿಲಿ, ತಜಕಿಸ್ತಾನ್ ಮತ್ತು ಅಮೆರಿಕದಲ್ಲಿ ಭೂಕಂಪನದ ಅನುಭವವಾಗುತ್ತಿದೆ. ಮುಂದಿನ 48 ಗಂಟೆಗಳ ಕಾಲ ಈ ಎಲ್ಲಾ ಪ್ರದೇಶಗಳ ಜನರು ಜಾಗೃತರಾಗಿರಬೇಕು. ಏಕೆಂದರೆ ಇದರ ನಂತರವೂ ಭೂಕಂಪದ ಅನುಭವ ಮತ್ತೆ ಆಗಬಹುದು ಎಂದು ಪ್ರೊಫೆಸರ್ ಆರ್ಯ ಹೇಳಿದ್ದಾರೆ.
ಓದಿ:ನೇಪಾಳದಲ್ಲಿ ಪ್ರಬಲ ಭೂಕಂಪ: ಸಾವಿನ ಸಂಖ್ಯೆ 128ಕ್ಕೆ ಏರಿಕೆ