ಪಣಜಿ (ಗೋವಾ) : ಮಹದಾಯಿ ನದಿಯಿಂದ ಕರ್ನಾಟಕಕ್ಕೆ ನೀರು ಹರಿಸಲು ಯಾವುದೇ ಪರಿಸರ ಅನುಮತಿ ನೀಡದಂತೆ ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಅರಣ್ಯ)ಯ ಮುಂದೆ ತಮ್ಮ ಸರ್ಕಾರ ಪ್ರಬಲವಾದ ವಾದ ಮಂಡಿಸಿದೆ ಎಂದು ಗೋವಾ ಮುಖ್ಯಮಂತ್ರಿ ಪ್ರಮೋದ್ ಸಾವಂತ್ ಹೇಳಿದ್ದಾರೆ. ತಾವು ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಾಗಿನಿಂದ ತಮ್ಮ ಮುಂದಿರುವ ಮಹದಾಯಿ ಜಲ ವಿವಾದವು ಒಂದು ಪ್ರಮುಖ ಸಮಸ್ಯೆಯಾಗಿದೆ ಎಂದು ಬುಧವಾರ ತಮ್ಮ ಬಜೆಟ್ ಭಾಷಣದಲ್ಲಿ ಪ್ರಮೋದ್ ಸಾವಂತ್ ಹೇಳಿದರು. ಜಲಾನಯನ ಪ್ರದೇಶದ ಹೊರಗೆ 3.9 ಟಿಎಂಸಿ ನೀರನ್ನು ತಿರುಗಿಸಲು ಅನುಮತಿ ನೀಡಿ ನ್ಯಾಯಮಂಡಳಿ ಆದೇಶ ನೀಡಿತ್ತು. ಈ ಆದೇಶವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಲು ತಕ್ಷಣದ ಕ್ರಮಗಳನ್ನು ನಾನು ತೆಗೆದುಕೊಂಡಿದ್ದೇನೆ ಎಂದು ಅವರು ಹೇಳಿದರು.
ಮಹದಾಯಿ ಯೋಜನೆಗೆ ಯಾವುದೇ ಪರಿಸರಾತ್ಮಕ ಅನುಮತಿ ನೀಡದಂತೆ ಬೆಂಗಳೂರು ಮತ್ತು ಹೊಸದಿಲ್ಲಿಯಲ್ಲಿರುವ ಪ್ರಾದೇಶಿಕ ಉನ್ನತಾಧಿಕಾರ ಸಮಿತಿ (ಅರಣ್ಯ)ಯ ಮುಂದೆ ಸಶಕ್ತ ವಾದವನ್ನು ಮಂಡಿಸಿದ್ದೇವೆ. ಕರ್ನಾಟಕವು ತನ್ನ ಎಲ್ಲಾ ಚಟುವಟಿಕೆಗಳನ್ನು ನಿಲ್ಲಿಸುವಂತೆ ಗೋವಾದ ಮುಖ್ಯ ವನ್ಯಜೀವಿ ವಾರ್ಡನ್ ಆದೇಶಿಸಿದ್ದಾರೆ ಎಂದು ಅವರು ಹೇಳಿದರು. ಈಗಿರುವ ಪರಿಸ್ಥಿತಿಯಲ್ಲಿ ನಾವು ಸುಪ್ರೀಂ ಕೋರ್ಟ್‌ನಿಂದ ಅನುಕೂಲಕರ ಆದೇಶಗಳನ್ನು ಪಡೆದಿದ್ದೇವೆ. ಪರಿಸರ ಕಾನೂನಿನಡಿಯಲ್ಲಿ ಅನುಮತಿಗಳನ್ನು ಪಡೆಯದ ಹೊರತು ಕರ್ನಾಟಕವು ಯಾವುದೇ ಮುಂದಿನ ಕೆಲಸ ಅಥವಾ ತಿರುವು ಕಾಮಗಾರಿ ಕೈಗೊಳ್ಳುವುದನ್ನು ಈ ಆದೇಶ ತಡೆಯುತ್ತದೆ. ನಮ್ಮ ಸರ್ಕಾರವು ಕರ್ನಾಟಕದ ಚಟುವಟಿಕೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿದೆ ಮತ್ತು ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳ ಮುಂದೆ ಬಾಕಿ ಉಳಿದಿರುವ ಸಮಸ್ಯೆಗಳ ಬಗ್ಗೆ ನಿಗಾ ವಹಿಸಿದೆ ಎಂದು ಅವರು ತಿಳಿಸಿದರು.