ಆಗ್ರಾ, ಉತ್ತರಪ್ರದೇಶ: ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗುತ್ತಿದೆ. ತೋಟವೊಂದರಲ್ಲಿ ಆಟವಾಡುತ್ತಿದ್ದ ಇಬ್ಬರು ಬಾಲಕಿಯರ ಮೇಲೆ ಬೀದಿ ನಾಯಿಗಳು ದಾಳಿ (Stray Dogs Attack) ಮಾಡಿದ್ದು, ಬಾಲಕಿಯೊಬ್ಬಳನ್ನು ಬಲಿ ಪಡೆದಿವೆ. ಇನ್ನೊಬ್ಬ ಬಾಲಕಿ ಗಂಭೀರವಾಗಿ ಗಾಯಗೊಂಡಿರುವುದು ಬೆಳಕಿಗೆ ಬಂದಿದೆ.
ಹೌದು, ಜಿಲ್ಲೆಯ ದೌಕಿ ಪ್ರದೇಶದ ಕುಯಿ ಕುಮಾರ್‌ಗಢ ಗ್ರಾಮದ ತೋಟದಲ್ಲಿ ಇಬ್ಬರು ಹುಡುಗಿಯರು ಆಟವಾಡುತ್ತಿದ್ದರು. ಇಬ್ಬರೂ ಬಾಲಕಿಯರ ಮೇಲೆ 6 ನಾಯಿಗಳು ದಾಳಿ ನಡೆಸಿವೆ. ನಾಯಿಗಳು ಅವುಗಳನ್ನು ತೋಟದಿಂದ ಹೊರಗೆ ಎಳೆಯಲು ಪ್ರಾರಂಭಿಸಿದವು. ಹುಡುಗಿಯರು ಕಿರುಚುತ್ತಲೇ ಇದ್ದರು. ಈ ವೇಳೆ, ನಾಯಿಗಳು ಹೆಣ್ಣು ಮಗುವನ್ನು ಕೊಂದು ಹಾಕಿವೆ. ಮತ್ತೊಬ್ಬ ಬಾಲಕಿಗೆ ತೀವ್ರವಾಗಿ ಗಾಯಗೊಳಿಸಿವೆ. ಗಾಯಗೊಂಡ ಬಾಲಕಿಯನ್ನು ಆಗ್ರಾದ ಎಸ್‌ಎನ್ ವೈದ್ಯಕೀಯ ಕಾಲೇಜಿಗೆ ದಾಖಲಿಸಲಾಗಿದೆ.
ಕುಯಿ ಕುಮಾರಗಢ ಗ್ರಾಮದ ನಿವಾಸಿ ಸುಗ್ರೀವನ ಅವರ ಐದು ವರ್ಷದ ಮಗಳು ಕಾಂಚನ್ ತನ್ನ ಹಿರಿಯ ಸೋದರ ಸಂಬಂಧಿ ರಶ್ಮಿಯೊಂದಿಗೆ ಮನೆಯ ಹಿಂದಿನ ತೋಟದಲ್ಲಿ ಆಟವಾಡುತ್ತಿದ್ದಳು. ಈ ವೇಳೆ, 6 ನಾಯಿಗಳು ಅಮಾಯಕ ಬಾಲಕಿಯರ ಮೇಲೆ ದಾಳಿ ನಡೆಸಿವೆ ಎಂದು ಕಾಂಚನ್ ಅವರ ಚಿಕ್ಕಪ್ಪ ಡೋರಿ ಲಾಲ್ ತಿಳಿಸಿದ್ದಾರೆ.
ಕ್ರೂರ ನಾಯಿಗಳು ಕಾಂಚನ್ ಮತ್ತು ರಶ್ಮಿಯನ್ನು ಹತ್ತಿರದ ಜಮೀನಿಗೆ ಎಳೆದೊಯ್ದಿವೆ. ನಾಯಿಗಳ ದಾಳಿಯ ನಂತರ ಕಾಂಚನ್ ಕಿರುಚುತ್ತಲೇ ಇದ್ದಳು. ಆದರೆ, ಸ್ವಲ್ಪದರಲ್ಲೇ ಆಕೆ ಮೃತಪಟ್ಟಿದ್ದಾಳೆ. ಬಾಲಕಿ ರಶ್ಮಿ ಮೇಲೂ ನಾಯಿಗಳು ದಾಳಿ ನಡೆಸಿವೆ. ಆಕೆಯ ಕಿರುಚಾಟ ಕೇಳಿ ಪಕ್ಕದ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಗ್ರಾಮಸ್ಥರೊಬ್ಬರ ಗಮನಕ್ಕೆ ಬಂದಿತ್ತು. ನಾಯಿಗಳನ್ನು ಓಡಿಸಲು ಯತ್ನಿಸಿದಾಗ ಅವರ ಮೇಲೆಯೂ ದಾಳಿ ಮಾಡಿವೆ. ಈ ವೇಳೆ ಗ್ರಾಮಸ್ಥ ಭೂರಿ ಸಿಂಗ್ ಟ್ರ್ಯಾಕ್ಟರ್ ಮೂಲಕ ನಾಯಿಗಳನ್ನು ಓಡಿಸಿದ್ದಾರೆ.