ನೋಯ್ಡಾ(ಉತ್ತರ ಪ್ರದೇಶ):ಬೀದಿ ನಾಯಿಗಳ ದಾಳಿಯಿಂದಾಗಿ ಪುಟ್ಟ ಬಾಲಕ ಮೃತಪಟ್ಟಿರುವ ಘಟನೆ ನೋಯ್ಡಾ ಲೋಟಸ್ ಬೌಲೆವಾರ್ಡ್ ಸೊಸೈಟಿ ಟವರ್-30 ಬಳಿ ನಡೆದಿದೆ. ಒಂದು ವರ್ಷ ವಯಸ್ಸಿನ ಕಂದಮ್ಮ ಅರವಿಂದ್ ನಾಯಿ ದಾಳಿಗೊಳಗಾಗಿ ಮೃತಪಟ್ಟಿರುವ ಬಾಲಕ.
ಘಟನೆ ಬಗ್ಗೆ ಅಪಾರ್ಟ್‌ಮೆಂಟ್ ಮಾಲೀಕರ ಸಂಘದ ಉಪಾಧ್ಯಕ್ಷ ಧರಮ್ ವೀರ್ ಯಾದವ್ ಮಾತನಾಡಿ, ಲೋಟಸ್ ಬೌಲೆವಾರ್ಡ್ ಸೊಸೈಟಿ ಆವರಣದಲ್ಲಿ ಕೆಲ ಕಟ್ಟಡ ಕಾಮಗಾರಿ ನಡೆಯುತ್ತಿದ್ದ ವೇಳೆ ಈ ಘಟನೆ ನಡೆದಿದೆ. ಮಗುವಿನ ಪೋಷಕರಾದ ರಾಜೇಶ್ ಮತ್ತು ಸಪ್ನಾ ಕಟ್ಟಡ ಕಾರ್ಮಿಕರಾಗಿದ್ದು, ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಈ ವೇಳೆ ಮೂರು ಬೀದಿ ನಾಯಿಗಳು ಮಗುವಿನ ಮೇಲೆ ದಾಳಿ ಮಾಡಿವೆ.
ಆಗ ಸಮೀಪದಲ್ಲಿ ಆಟವಾಡುತ್ತಿದ್ದ ಮಗುವಿನ ಸಹೋದರ ಕಿರುಚಿಕೊಂಡಾಗ ತಾಯಿ ಮತ್ತು ಇತರ ಕಾರ್ಮಿಕರು ಮಗುವನ್ನು ರಕ್ಷಿಸಿದರು. ಬಳಿಕ ಮಗುವನ್ನು ಹತ್ತಿರದ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಬಾಲಕ ಮಂಗಳವಾರ ರಾತ್ರಿ ಸಾವನಪ್ಪಿದ್ದಾನೆ ಎಂದು ಹೇಳಿದರು.
ಮಗುವಿನ ಹೊಟ್ಟೆಯ ಮೇಲೆ 25 ಕಡೆ ನಾಯಿಗಳು ಕಚ್ಚಿವೆ ಎಂದು ಆಸ್ಪತ್ರೆಯ ಡಾ.ಅಜಿತ್ ಸಿಂಗ್ ತಿಳಿಸಿದ್ದಾರೆ. ಘಟನೆ ಸಂಬಂಧ ಪೊಲೀಸರು ಅಸಹಜ ಸಾವು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ನಮಗೆ ಮಾಹಿತಿ ಸಿಕ್ಕಿದ್ದು, ಇಂತಹ ಘಟನೆಗಳು ಮರುಕಳಿಸದಂತೆ ಪೌರಾಡಳಿತ ಇಲಾಖೆಯೊಂದಿಗೆ ಸಮನ್ವಯದಿಂದ ಅಗತ್ಯ ಕ್ರಮ ಕೈಗೊಳ್ಳುತ್ತೇವೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ:ಭಲೇ ಅಮ್ಮ.. ಬೀದಿನಾಯಿಗಳ ದಾಳಿಯಿಂದ ಮೂವರು ಮಕ್ಕಳನ್ನು ರಕ್ಷಿಸಿದ್ಲು ಗರ್ಭಿಣಿ ತಾಯಿ!