ನವದೆಹಲಿ: ನೀಲಿ ಬಾನಿನಲ್ಲಿ ನಡೆಯುವ ಪ್ರತಿಯೊಂದು ವಿಸ್ಮಯಗಳು ಎಂಥವರಲ್ಲೂ ಬೆರಗು ಹುಟ್ಟಿಸುತ್ತವೆ. ಪೂರ್ಣ ಚಂದಿರ ಗುರುವಾರ ಬಾನಂಗಳದಲ್ಲಿ ಸ್ಟ್ರಾಬೆರಿ ಬಣ್ಣದಲ್ಲಿ ಗೋಚರಿಸಿದ್ದಾನೆ.
ಆಕಾಶದಲ್ಲಿ ನಡೆಯುವ ವಿಸ್ಮಯದ ವಿದ್ಯಮಾನಗಳು ಎಲ್ಲರನ್ನು ಬೆರಗುಗೊಳಿಸುವಂತೆ ಮಾಡುತ್ತದೆ. ಸೂಪರ್ ಮೂನ್, ನೀಲಿ ಚಂದಿರ ಹಾಗೂ ರಕ್ತ ಚಂದ್ರ ಸೇರಿದಂತೆ ಹಲವು ರೀತಿಯಲ್ಲಿ ಚಂದಿರ ಗೋಚಿಸುವುದರ ಹಿಂದೆ ನಾನಾ ವೈಜ್ಞಾನಿಕ ಕಾರಣಗಳಿವೆ. ಕೆಲವೊಮ್ಮೆ ಘಟಿಸುವ ಚಂದ್ರ ಗ್ರಹಣವನ್ನು ರಕ್ತ ಚಂದ್ರ ಎಂದೂ ಕರೆಯಲಾಗುತ್ತದೆ. ಅದೇ ರೀತಿ ಈ ನಿನ್ನೆಯ ದಿನ ಚಂದ್ರ ಸ್ಟ್ರಾಬೆರಿ ಬಣ್ಣದಲ್ಲಿ ಕಾಣಿಸಿದ ಕಾರಣ ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗಿದೆ.
ಒಂದೊಂದು ದೇಶದಲ್ಲೂ ಒಂದೊಂದು ರೀತಿಯ ಹೆಸರಿನಿಂದ ಕರೆಯಲಾಗುತ್ತದೆ. ಯುರೋಪ್ನಲ್ಲಿ ರೋಸ್ ಮೂನ್, ಉತ್ತರ ಅಮೆರಿಕದಲ್ಲಿ ಸ್ಟ್ರಾಬೆರಿ ಮೂನ್, ಉತ್ತರ ಗೋಳಾರ್ಧದಲ್ಲಿ ಹಾಟ್ ಮೂನ್ ಎಂದು ಹೆಸರಿಸಲಾಗಿದೆ.
ಜೂನ್ 24 ರಂದು ಗೋಚರಿಸಿದ ಸೂಪರ್ಮೂನ್ಗೆ ಸ್ಟ್ರಾಬೆರಿ ಮೂನ್ ಎಂಬ ಹೆಸರು ಬರಲು ವಿಶೇಷ ಕಾರಣವಿದೆ. ಅಮೆರಿಕದ ಉತ್ತರ ಭಾಗದಲ್ಲಿ ಜೂನ್ ತಿಂಗಳ ಅವಧಿ ಸ್ಟ್ರಾಬೆರಿ ಹಣ್ಣು ಬೆಳೆಯುವ ಸಮಯ ಇದಾಗಿದೆ. ಈ ಕಾರಣಕ್ಕಾಗಿ ಇದನ್ನು ಸ್ಟ್ರಾಬೆರಿ ಮೂನ್ ಎಂದು ಕರೆಯಲಾಗುತ್ತದೆ.
ಮೊದಲಿಗೆ ಕಿತ್ತಳೆ ಮಂಡಲದಂತೆ ಕಂಡು ಬರುವ ಚಂದ್ರ ಬಳಿಕ ತಿಳಿ ಹಳದಿ ಬಣ್ಣಕ್ಕೆ ತಿರುಗುತ್ತಾನೆ. ಆಕಾಶದಲ್ಲಿ ಚಂದ್ರನು ಪ್ರಕಾಶಮಾನವಾಗಿ ದೊಡ್ಡದಾಗಿ ಕಾಣಿಸುತ್ತದೆ. ಅಬ್ಲೂಮಿಂಗ್ ಮೂನ್, ಗ್ರೀನ್ ಕಾರ್ನ್ ಮೂನ್, ಆನರ್ ಮೂನ್, ಬರ್ತ್ ಮೂನ್, ಎಗ್ ಲೇಯಿಂಗ್ ಮೂನ್, ಹ್ಯಾಚಿಂಗ್ ಮೂನ್, ಹನಿ ಮೂನ್, ಮೀಡ್ ಮೂನ್ ಎಂಬ ಹೆಸರಿನಿಂದ ಕರೆಯಲಾಗುತ್ತದೆ.