ಹೈದರಾಬಾದ್ (ತೆಲಂಗಾಣ): ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಬಹುಮತದೊಂದಿಗೆ ಅಧಿಕಾರಕ್ಕೆ ಬಂದಿದೆ. ಇದಕ್ಕೆ ಚುನಾವಣಾ ಸಂದರ್ಭದಲ್ಲಿ ಕೈ ಪಾಳಯ ರೂಪಿಸಿದ ಹೊಸ - ಹೊಸ ಕಾರ್ಯತಂತ್ರಗಳು ಮತ್ತು ನಿರೂಪಣೆಗಳು ಸಹ ಪ್ರಮುಖ ಕಾರಣವಾಗಿವೆ. ಆಡಳಿತಾರೂಢ ಬಿಜೆಪಿ ವಿರುದ್ಧದ ಭ್ರಷ್ಟಾಚಾರ ಆರೋಪವನ್ನು ಚುನಾವಣಾ ಅಸ್ತ್ರವಾಗಿ ಬಳಸಿಕೊಂಡ ಕಾಂಗ್ರೆಸ್ ಸಮರ್ಥವಾಗಿ ಜನರ ಮುಂದೆ ಬಿಂಬಿಸುವಲ್ಲಿಯೂ ಯಶ ಕಂಡಿದೆ. ಇದರಲ್ಲಿ ಪಕ್ಷದ ನಾಯಕರು ಮತ್ತು ಕಾರ್ಯಕರ್ತರೊಂದಿಗೆ ಚುನಾವಣಾ ತಂತ್ರಗಾರ ಸುನಿಲ್ ಕಾನುಗೋಲು ಪಾತ್ರವೂ ಬಹುಮುಖ್ಯವಾಗಿದೆ.
ಸುನಿಲ್ ಕಾನುಗೋಲು ಕರ್ನಾಟಕದವರೇ ಆಗಿದ್ದರೂ ಬೆಳೆದಿದ್ದು ನೆರೆಯ ತಮಿಳುನಾಡಿನ ಚೆನ್ನೈನಲ್ಲಿ. ಈ ಹಿಂದೆ ಚುನಾವಣಾ ತಂತ್ರಗಾರ ಪ್ರಶಾಂತ್ ಕಿಶೋರ್ ಅವರೊಂದಿಗೆ ಕೆಲಸ ಮಾಡಿದ್ದರು. 2014ರಲ್ಲಿ ನರೇಂದ್ರ ಮೋದಿಯವರ ಚುನಾವಣಾ ಪ್ರಚಾರಗಳಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಬಿಜೆಪಿಯ ಬಿಲಿಯನ್ ಮೈಂಡ್ಸ್ ಅಸೋಶಿಯೇಷನ್ (Association of Billion Minds - ABM) ಮುಖ್ಯಸ್ಥರಾಗಿಯೂ ಇವರು ಸೇವೆ ಸಲ್ಲಿಸಿದರು.
ಬಿಜೆಪಿಯ ಪರವಾಗಿ ಉತ್ತರ ಪ್ರದೇಶ, ಉತ್ತರಾಖಂಡ, ಹಿಮಾಚಲ ಪ್ರದೇಶ, ಗುಜರಾತ್ ಚುನಾವಣೆಯಲ್ಲೂ ಚುನಾವಣಾ ಪ್ರಚಾರಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿದ್ದರು. ಈ ಎಲ್ಲ ರಾಜ್ಯಗಳಲ್ಲಿ ಬಿಜೆಪಿ ವಿಜಯಶಾಲಿಯಾಗಿತ್ತು. 2018ರಲ್ಲಿ ಕರ್ನಾಟಕದಲ್ಲೂ ಬಿಜೆಪಿ ಪರ ಇದೇ ಸುನಿಲ್ ಕಾನುಗೋಲು ಕೆಲಸವನ್ನೂ ಮಾಡಿದ್ದರು. ಆಗ ಅತಿದೊಡ್ಡ ಪಕ್ಷವಾಗಿ ಕಮಲ ಪಕ್ಷ ಹೊರಹೊಮ್ಮಿತ್ತು. ಈ ಬಾರಿ ಕರ್ನಾಟಕದಲ್ಲಿ ಕಾಂಗ್ರೆಸ್ ಪರವಾಗಿ ಚುನಾವಣಾ ತಂತ್ರಗಳನ್ನು ಸುನಿಲ್ ಕಾನುಗೋಲು ರೂಪಿಸಿದ್ದರು. ಕಳೆದ ವರ್ಷದ ಮಾರ್ಚ್‌ನಲ್ಲಿ ಅವರನ್ನು ಕಾಂಗ್ರೆಸ್ ನೇಮಿಸಿಕೊಂಡಿತ್ತು. ಇದಾದ ಎರಡು ತಿಂಗಳ ನಂತರ ಸೋನಿಯಾ ಗಾಂಧಿಯವರು ಕಾನುಗೋಲು ಅವರನ್ನು ಪಕ್ಷದ 2024ರ ಲೋಕಸಭಾ ಚುನಾವಣಾ ಕಾರ್ಯಪಡೆಯ ಸದಸ್ಯರನ್ನಾಗಿ ನೇಮಿಸಿದ್ದರು.