ಮಹಾರಾಷ್ಟ್ರದಲ್ಲಿ ದಡಕ್ಕೆ ಬಂದ ತಿಮಿಂಗಿಲ ಮರಿ ಮುಂಬೈ (ಮಹಾರಾಷ್ಟ್ರ) :ಮಹಾರಾಷ್ಟ್ರದ ರತ್ನಗಿರಿ ಜಿಲ್ಲೆಯ ಗಣಪತಿಪುಲೆ ಸಮುದ್ರದ ದಡದಲ್ಲಿ ಸಿಲುಕಿದ್ದ 35 ಅಡಿ ಉದ್ದದ ತಿಮಿಂಗಿಲ ಮರಿಯನ್ನು ಬುಧವಾರ 40 ಗಂಟೆಗಳ ಪ್ರಯತ್ನದ ನಂತರ ಮತ್ತೆ ಸಮುದ್ರಕ್ಕೆ ಬಿಡಲಾಗಿದೆ. ಇದರಿಂದಾಗಿ ಅಲ್ಲಿ ನೆರೆದಿದ್ದ ಪ್ರವಾಸಿಗರು ಹಾಗೂ ಸ್ಥಳೀಯರಲ್ಲಿ ಸಂತಸ ಮೂಡಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಸುಮಾರು 4 ಟನ್ ತೂಕದ ತಿಮಿಂಗಿಲ ಮರಿ ಸೋಮವಾರ ಸಮುದ್ರದ ದಡವನ್ನು ತಲುಪಿತ್ತು. ಆದರೆ, ಕಡಿಮೆ ಉಬ್ಬರವಿಳಿತದ ಕಾರಣ ಮೀನು ಬೀಚ್ ಬಳಿ ಮರಳಿನಲ್ಲಿ ಸಿಲುಕಿಕೊಂಡಿತ್ತು. ಸಮುದ್ರ ಸಸ್ತನಿಯು ಆಳವಿಲ್ಲದ ನೀರಿನಲ್ಲಿ ಹೆಣಗಾಡುತ್ತಿರುವುದನ್ನು ಗಮನಿಸಿದ ಪ್ರಯಾಣಿಕರು ಮತ್ತು ಸ್ಥಳೀಯರು ರತ್ನಗಿರಿ ಪೊಲೀಸ್ ಮತ್ತು ಕೋಸ್ಟ್ ಗಾರ್ಡ್ ಸೇರಿದಂತೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ರಕ್ಷಣಾ ಕಾರ್ಯಾಚರಣೆ ನಡೆಸಲಾಯಿತು ಎಂದಿದ್ದಾರೆ.
ಅಗ್ನಿಶಾಮಕ ದಳ, ಪೊಲೀಸರು ಮತ್ತು ಸ್ಥಳೀಯರು ತಿಮಿಂಗಿಲ ಮರಿಯನ್ನು ಸಮುದ್ರಕ್ಕೆ ತಳ್ಳಲು ನಡೆಸಿದ ಆರಂಭಿಕ ಪ್ರಯತ್ನಗಳು ಯಶಸ್ವಿಯಾಗಲಿಲ್ಲ. ಇದರಿಂದ ಮೀನಿನ ಸುರಕ್ಷತೆ ಮತ್ತು ಉಳಿವಿನ ಬಗ್ಗೆ ಸಿಬ್ಬಂದಿಯಲ್ಲಿ ಕಳವಳ ಮೂಡಿಸಿತು. ನಂತರ ಮೀನನ್ನು ಜೀವಂತವಾಗಿರಿಸಲು ಸಮುದ್ರದ ನೀರು ಸುರಿದಿದ್ದಾರೆ. ಅದನ್ನು ಉಳಿಸಲು ಅಗತ್ಯವಾದ ವಾತಾವರಣ ಸೃಷ್ಟಿಸಲು ಹತ್ತಿಯಿಂದ ಮುಚ್ಚಲಾಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದಾದ ಬಳಿಕ ಪಶು ವೈದ್ಯರ ತಂಡ ಕೂಡ ಸ್ಥಳಕ್ಕೆ ಆಗಮಿಸಿ ತಿಮಿಂಗಿಲ ಮರಿಗೆ ಲಿಕ್ವಿಡ್ ನೀಡಿದ್ದಾರೆ. ನಂತರ ಅದನ್ನು ಬೆಲ್ಟ್‌ನಿಂದ ಕಟ್ಟಿ ತಳ್ಳುವ ಪ್ರಯತ್ನ ಮಾಡಲಾಗಿದೆ. ಆದರೆ, ಇದರಿಂದಾಗಿ ಮೀನಿನ ಬಾಲಕ್ಕೆ ಸಾಕಷ್ಟು ಗಾಯವಾಗಿದೆ. ಇದರಿಂದಾಗಿ ಅಧಿಕಾರಿಗಳು ಈ ಕಾರ್ಯಾಚರಣೆ ಕೂಡಲೇ ನಿಲ್ಲಿಸಿದ್ದಾರೆ. ಈ ಮಧ್ಯೆ ತಿಮಿಂಗಿಲ ಮರಿ ಆರೋಗ್ಯದ ಮೇಲ್ವಿಚಾರಣೆ ಮಾಡಲು ಸಮುದ್ರ ತಜ್ಞರನ್ನು ಸಹ ನಿಯೋಜಿಸಲಾಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘಟನಾ ಸ್ಥಳಕ್ಕೆ ಮಂಗಳವಾರ ರಾತ್ರಿ ಟಗ್ ಬೋಟ್ ತರಲಾಯಿತು. ನಂತರ ತಿಮಿಂಗಿಲನ್ನು ಬಲೆಯಲ್ಲೇ ಇರಿಸಲಾಗಿತ್ತು. ಸಮುದ್ರದಲ್ಲಿ ಉಬ್ಬರವಿಳಿತ ಇರುವುದರಿಂದ ಅಧಿಕಾರಿಗಳು ಮತ್ತು ಸ್ಥಳೀಯರು ಮತ್ತೆ ಮೀನನ್ನು ನೀರಿಗೆ ತಳ್ಳಲು ಪ್ರಾರಂಭಿಸಿದರು. ಈ ವೇಳೆ ಆಳವಾದ ನೀರಿನ ಕಡೆಗೆ ಮೀನು ಜಾರುವ ಪ್ರಯತ್ನವನ್ನು ಮಾಡಿದ್ದರಿಂದ ಸಿಬ್ಬಂದಿ ಮತ್ತಷ್ಟು ಹುಮ್ಮಸಿನಿಂದ ಮೀನನ್ನು ತಳ್ಳಿದರು ಎಂದು ಮಾಹಿತಿ ನೀಡಿದ್ದಾರೆ.
''ಹಲವಾರು ಗಂಟೆಗಳ ಕಾಲ ಪಟ್ಟುಬಿಡದೇ ಕಾರ್ಯಾಚರಣೆ ನಡೆಸಿದ ನಂತರ ಬುಧವಾರ ಮುಂಜಾನೆ ಟಗ್ ಬೋಟ್ ಮೂಲಕ ತಿಮಿಂಗಿಲ ಮರಿಯನ್ನು ಸಮುದ್ರದಲ್ಲಿನ 7 ರಿಂದ 8 ನಾಟಿಕಲ್ ಮೈಲುಗಳಷ್ಟು ದೂರಕ್ಕೆ ಎಳೆದು ಹಾಕಲಾಯಿತು. ಒಮ್ಮೆ ತನ್ನ ಸಹಜ ಆವಾಸಸ್ಥಾನಕ್ಕೆ ಮರಳಿದ ತಿಮಿಂಗಿಲ ಮರಿ, ಬಲೆ ಮುರಿದು ತಾನಾಗಿಯೇ ಈಜಲು ಆರಂಭಿಸಿತು. ನಂತರ ಅದು ಆಳಕ್ಕೆ ಈಜಿ ಸಮುದ್ರದಲ್ಲಿ ಕಣ್ಮರೆಯಾಯಿತು'' ಎಂದು ರತ್ನಗಿರಿ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಧನಂಜಯ್ ಕುಲಕರ್ಣಿ ತಿಳಿಸಿದ್ದಾರೆ.
ಇದನ್ನೂ ಓದಿ:ನರ್ಮದಾ ನದಿಯಲ್ಲಿ ಮುಳುಗಿ ಮೂವರು ಮೃತ.. ಒಬ್ಬ ಬಚಾವ್