ಮುಂಬೈ (ಮಹಾರಾಷ್ಟ್ರ): ತೌಕ್ತೆ ಚಂಡಮಾರುತದ ಅಬ್ಬರಕ್ಕೆ ಮುಳುಗಿದ್ದ P305 ಬೋಟ್ನಲ್ಲಿದ್ದ 186 ಮಂದಿಯನ್ನು ಭಾರತೀಯ ನೌಕಾಪಡೆ ರಕ್ಷಿಸಿದ್ದು, ಅಪಾಯದಿಂದ ಪಾರಾಗಿ ಬದುಕುಳಿದ ಬಾರ್ಜ್ ಸಿಬ್ಬಂದಿ ತಾವು ಎದುರಿಸಿದ ಕರಾಳ ಪರಿಸ್ಥಿತಿಯನ್ನು ವಿವರಿಸಿದ್ದಾರೆ.
"ಬೋಟ್ ಮುಳುಗುತ್ತಿತ್ತು, ಉಪಾಯವಿಲ್ಲದೆ ಸಮುದ್ರಕ್ಕೆ ಹಾರಬೇಕಾಯಿತು. ಭೀಕರ ಸಮುದ್ರದ ಅಲೆಗಳ ನಡುವೆ ಲೈಫ್ ಜಾಕೆಟ್ ಹಾಕ್ಕೊಂಡು 11 ಗಂಟೆ ಕಳೆದಿರುವೆ. ಸಮುದ್ರದಲ್ಲಿ ತೇಲುತ್ತಿದ್ದ ನನ್ನನ್ನು ರಕ್ಷಿಸಿದ ನೌಕಾಪಡೆ ಸಿಬ್ಬಂದಿಗೆ ಧನ್ಯವಾದಗಳು" ಎಂದು ಅಮಿತ್ ಕುಮಾರ್ ಕುಶ್ವಾಹ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಸಮುದ್ರದಿಂದ ರಕ್ಷಿಸುವ ಮೊದಲು ತೀವ್ರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಬೋಟ್ ಸಿಬ್ಬಂದಿ, " ನೌಕಾಪಡೆಗೆ ಇಲ್ಲದಿದ್ದರೆ ತನ್ನ ಸಹೋದ್ಯೋಗಿಗಳು ಯಾರೂ ಜೀವಂತವಾಗಿರುತ್ತಿರಲಿಲ್ಲ. ನೌಕಾಪಡೆಯ ಸಿಬ್ಬಂದಿ ಕಾರಣದಿಂದಾಗಿ ನಾನೂ ಜೀವಂತವಾಗಿದ್ದೇನೆ" ಎಂದು ಮಂಡಿಯೂರಿ ಕೃತಜ್ಞತೆ ಸಲ್ಲಿಸಿದ್ದಾರೆ.