ನವದೆಹಲಿ: ಯೋಗಗುರು ಬಾಬಾ ರಾಮ್ದೇವ್ ನೇತೃತ್ವದ ಪತಂಜಲಿ ಆಯುರ್ವೇದ ಸಂಸ್ಥೆಗೆ ಸುಪ್ರೀಂ ಕೋರ್ಟ್ ಮಂಗಳವಾರ ಚಾಟಿ ಬೀಸಿದೆ. ಅಲೋಪತಿಯಂತಹ ಆಧುನಿಕ ಚಿಕಿತ್ಸಾ ಪದ್ಧತಿಗಳ ವಿರುದ್ಧ ತಪ್ಪುದಾರಿಗೆಳೆಯುವ ಹೇಳಿಕೆಗಳು ಮತ್ತು ಜಾಹೀರಾತುಗಳಿಗೆ ಸಂಬಂಧಿಸಿದಂತೆ ಸರ್ವೋಚ್ಛ ನ್ಯಾಯಾಲಯವು ತರಾಟೆಗೆ ತೆಗೆದುಕೊಂಡಿದ್ದು, ಇನ್ನುಂದೆ ಇಂತಹ ತಪ್ಪು ಹೇಳಿಕೆಗಳಿಗೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ.ಗಳ ದಂಡ ವಿಧಿಸಬೇಕಾಗುತ್ತದೆ ಎಂದು ಖಡಕ್ ಎಚ್ಚರಿಕೆ ನೀಡಿದೆ.
ಸುಪ್ರೀಂ ಕೋರ್ಟ್ನ ನ್ಯಾಯಮೂರ್ತಿಗಳಾದ ಅಹ್ಸಾನುದ್ದೀನ್ ಅಮಾನುಲ್ಲಾ ಮತ್ತು ಪ್ರಶಾಂತ್ ಕುಮಾರ್ ಮಿಶ್ರಾ ಅವರನ್ನೊಳಗೊಂಡ ಪೀಠವು ಕಳೆದ ವರ್ಷ ಭಾರತೀಯ ವೈದ್ಯಕೀಯ ಸಂಘ (ಐಎಂಎ) ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸುತ್ತಿದೆ. ಈ ವಿಚಾರಣೆಯ ಸಂದರ್ಭದಲ್ಲಿ ಬಾಬಾ ರಾಮ್ದೇವ್ ಸಹಸ್ಥಾಪಿತ ಕಂಪನಿಗೆ ಕಠಿಣ ಎಚ್ಚರಿಕೆ ನೀಡಿ, ಪತಂಜಲಿ ಆಯುರ್ವೇದದ ಎಲ್ಲ ತಪ್ಪುದಾರಿಗೆಳೆಯುವ ಜಾಹೀರಾತುಗಳನ್ನು ತಕ್ಷಣವೇ ನಿಲ್ಲಿಸಬೇಕು ಎಂದು ಸೂಚಿಸಿದೆ.
ಇದೇ ವೇಳೆ, ಈ ವಿಷಯವನ್ನು ''ಅಲೋಪತಿ ವರ್ಸಸ್ ಆಯುರ್ವೇದ'' ಚರ್ಚೆಯನ್ನಾಗಿ ಮಾಡುವ ಬದಲಿಗೆ ತಪ್ಪು ದಾರಿಗೆಳೆಯುವ ವೈದ್ಯಕೀಯ ಜಾಹೀರಾತುಗಳ ಸಮಸ್ಯೆಗೆ ನಿಜವಾದ ಪರಿಹಾರ ಕಂಡುಕೊಳ್ಳುವುದನ್ನು ನ್ಯಾಯ ಪೀಠ ಗಮನಿಸಿದೆ. ಇದನ್ನು ಬಹಳ ಗಂಭೀರವಾಗಿ ಪರಿಗಣಿಸುತ್ತಿದ್ದು, ತಪ್ಪು ಹೇಳಿಕೆ ನೀಡಿದರೆ ಪ್ರತಿ ಉತ್ಪನ್ನದ ಮೇಲೆ 1 ಕೋಟಿ ರೂ. ದಂಡ ಹಾಕಬೇಕಾಗುತ್ತದೆ. ಪತಂಜಲಿ ಆಯುರ್ವೇದವು ಭವಿಷ್ಯದಲ್ಲಿ ಅಂತಹ ಯಾವುದೇ ಜಾಹೀರಾತುಗಳನ್ನು ಪ್ರಕಟಿಸುವುದು ಮತ್ತು ಮಾಧ್ಯಮಗಳಲ್ಲಿ ಅದು ಸಾಂದರ್ಭಿಕ ಹೇಳಿಕೆಗಳನ್ನು ನೀಡದಂತೆ ನೋಡಿಕೊಳ್ಳಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ.