ಕರ್ನಾಟಕ

karnataka

ಕರ್ನಾಟಕದ ಗಡಿ ಜಿಲ್ಲೆಗಳಿಗೆ ಮದ್ಯ, ನಗದು ಹರಿವು ನಿಲ್ಲಿಸಿ: ಆಂಧ್ರ ಪ್ರದೇಶಕ್ಕೆ ಚು.ಆಯೋಗ ಸೂಚನೆ

By

Published : May 1, 2023, 3:55 PM IST

ಕರ್ನಾಟಕ ವಿಧಾನಸಭೆ ಚುನಾವಣೆ ಸಮೀಪಿಸುತ್ತಿದೆ. ಆಂಧ್ರ ಪ್ರದೇಶಕ್ಕೆ ಹೊಂದಿಕೊಂಡಿರುವ ಕರ್ನಾಟಕದ ಗಡಿ ಜಿಲ್ಲೆಗಳಿಗೆ ಮದ್ಯ, ನಗದು ಸರಬರಾಜಾಗದಂತೆ ಕ್ರಮ ಕೈಗೊಳ್ಳಲು ಚುನಾವಣಾ ಆಯೋಗ ಕಟ್ಟುನಿಟ್ಟಿನ ಸೂಚನೆ ನೀಡಿದೆ.

ಭಾರತೀಯ ಚುನಾವಣಾ ಆಯೋಗ
ಭಾರತೀಯ ಚುನಾವಣಾ ಆಯೋಗ

ಅಮರಾವತಿ (ಆಂಧ್ರ ಪ್ರದೇಶ): ಮೇ 10 ರಂದು ನಡೆಯಲಿರುವ ಕರ್ನಾಟಕದ ವಿಧಾನಸಭಾ ಚುನಾವಣೆಯ ಪೂರ್ವದಲ್ಲಿ ರಾಜ್ಯದ ಗಡಿ ಜಿಲ್ಲೆಗಳಿಗೆ ಪ್ರಚೋದನೆಗಳ (ಮದ್ಯ, ನಗದು) ಹರಿವು ನಿಲ್ಲಿಸಲು ಸೂಕ್ತ ಕ್ರಮಗಳನ್ನು ಕೈಗೊಳ್ಳುವಂತೆ ಆಂಧ್ರ ಪ್ರದೇಶ ಸರ್ಕಾರದ ಹಿರಿಯ ಅಧಿಕಾರಿಗಳಿಗೆ ಸೋಮವಾರ ಭಾರತೀಯ ಚುನಾವಣಾ ಆಯೋಗ ಖಡಕ್ ಸೂಚನೆ ನೀಡಿದೆ.

ಕರ್ನಾಟಕದಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಯಲಿದ್ದು, ಮತದಾರರ ಮೇಲೆ ಪ್ರಭಾವ ಬೀರಲು ಮದ್ಯ, ನಗದು ಮತ್ತು ಇತರ ಪ್ರಚೋದನೆಗಳ ಚಲನೆಯನ್ನು ನಿರ್ಬಂಧಿಸುವ ಬಗ್ಗೆ ಸಭೆ ಆಯೋಗವು ಆಂಧ್ರದ ಅಧಿಕಾರಿಗಳೊಂದಿಗೆ ಮಹತ್ವದ ಸಭೆ ನಡೆಸಿದೆ. ಸೋಮವಾರ ಮುಖ್ಯ ಚುನಾವಣಾ ಆಯುಕ್ತ (ಸಿಇಸಿ) ರಾಜೀವ್ ಕುಮಾರ್ ಮತ್ತು ಇತರ ಚುನಾವಣಾ ಆಯುಕ್ತರು, ಆಂಧ್ರದ ಮುಖ್ಯ ಕಾರ್ಯದರ್ಶಿ, ಡಿಜಿಪಿ, ಮುಖ್ಯ ಚುನಾವಣಾ ಅಧಿಕಾರಿಗಳು (ಸಿಇಒಗಳು) ಮತ್ತು ಇತರ ಹಿರಿಯ ಅಧಿಕಾರಿಗಳೊಂದಿಗೆ ವಿಡಿಯೋ ಕಾನ್ಫರೆನ್ಸ್ ಸಭೆ ನಡೆಸಲಾಗಿದೆ ಎಂದು ರಾಜ್ಯ ಸರ್ಕಾರದ ಹೇಳಿಕೆ ತಿಳಿಸಿದೆ. ಆಂಧ್ರ ಪ್ರದೇಶದಿಂದ ಮುಖ್ಯ ಕಾರ್ಯದರ್ಶಿ ಕೆ.ಎಸ್.ಜವಾಹರ್ ರೆಡ್ಡಿ, ಪೊಲೀಸ್ ಮಹಾನಿರ್ದೇಶಕ ಕೆ.ವಿ.ರಾಜೇಂದ್ರನಾಥ ರೆಡ್ಡಿ, ಸಿಇಒ ಮುಖೇಶ್ ಕುಮಾರ್ ಮೀನಾ, ವಿಶೇಷ ಮುಖ್ಯ ಕಾರ್ಯದರ್ಶಿ ರಜತ್ ಭಾರ್ಗವ ಮತ್ತು ಇತರ ಹಿರಿಯ ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು.

ಚುನಾವಣಾ ಅಕ್ರಮಗಳಿಗೆ ಕಡಿವಾಣ: ರಾಜ್ಯದಲ್ಲಿ ಈವರೆಗೆ ಜಪ್ತಿಯಾದ ಅಕ್ರಮ ನಗದು ಮತ್ತು ಮದ್ಯ, ಚಿನ್ನಾಭರಣ ಸೇರಿದಂತೆ ಇತರೆ ವಸ್ತುಗಳ ಒಟ್ಟು ಮೌಲ್ಯ 300 ಕೋಟಿ ರೂ. ಗಡಿ ತಲುಪುವತ್ತ ಸಾಗಿದೆ. ಮತದಾರರನ್ನು ಸೆಳೆಯಲು ಮದ್ಯ, ನಗದು, ಉಡುಗೊರೆಗಳ ಮಹಾಪೂರವನ್ನು ಹರಿಸಲಾಗುತ್ತಿದೆ. ಈ ಸಂಬಂಧ ಚುನಾವಣಾ ಆಯೋಗ ಈವರೆಗೆ ಒಟ್ಟು 292.06 ಕೋಟಿ ರೂ.‌ಮೌಲ್ಯದ ನಗದು, ಮದ್ಯ, ಡ್ರಗ್ಸ್, ಉಡುಗೊರೆಗಳನ್ನು ವಶಪಡಿಸಿಕೊಂಡಿದೆ.

ವಿಚಕ್ಷಣ ದಳ, ಸ್ಥಿರ ಕಣ್ಗಾವಲು ಪಡೆ, ಐಟಿ, ಪೊಲೀಸ್ ಅಧಿಕಾರಿಗಳು ಈವರೆಗೆ (ಏಪ್ರಿಲ್​ 28-2023) ಒಟ್ಟು 102.90 ಕೋಟಿ ರೂ. ನಗದು ಜಪ್ತಿ ಮಾಡಿದ್ದರು. ಒಟ್ಟು 22.12 ಕೋಟಿ ಮೌಲ್ಯದ ಉಚಿತ ಉಡುಗೊರೆಗಳನ್ನು ವಶಪಡಿಸಿದ್ದಾರೆ.

ಈವರೆಗೆ ಒಟ್ಟು 68. 69 ಕೋಟಿ ಮೌಲ್ಯದ 18,16,507 ಲೀಟರ್ ಮದ್ಯ ವಶಪಡಿಸಿಕೊಳ್ಳಲಾಗಿದೆ. 17.88 ಕೋಟಿ ಮೌಲ್ಯದ 1,388 ಕೆ.ಜಿ. ಡ್ರಗ್ಸ್ ಜಪ್ತಿ ಮಾಡಲಾಗಿದೆ. ಒಟ್ಟು 76.01 ಕೋಟಿ ರೂ. ಬಂಗಾರ, 4.43 ಕೋಟಿ ರೂ.‌ಮೌಲ್ಯದ ಬೆಳ್ಳಿ ವಶಕ್ಕೆ ಪಡೆಯಲಾಗಿದೆ. ನಗದು, ಮದ್ಯ, ಮಾದಕ ದ್ರವ್ಯ, ಬೆಲೆಬಾಳುವ ಲೋಹ ಮತ್ತು ಉಡುಗೊರೆ ವಸ್ತುಗಳನ್ನು ವಶಪಡಿಸಿಕೊಂಡಿರುವ ವಿಚಕ್ಷಣ ದಳ, ಸ್ಥಿರ ಕಣ್ಗಾವಲು ತಂಡಗಳು ಮತ್ತು ಪೊಲೀಸ್ ಅಧಿಕಾರಿಗಳು 2,226 ಪ್ರಥಮ ತನಿಖಾ ವರದಿ (FIR) ದಾಖಲಿಸಿದ್ದಾರೆ.

ಜಾಮೀನು ರಹಿತ ವಾರಂಟ್​​​: ಚುನಾವಣೆ ಘೋಷಣೆಯಾದ ದಿನಾಂಕದಿಂದ ಇಲ್ಲಿಯವರೆಗೆ ಒಟ್ಟಾರೆ 69,805 ಶಸ್ತ್ರಾಸ್ತ್ರಗಳನ್ನು ಜಮೆ ಮಾಡಿಸಿಕೊಳ್ಳಲಾಗಿದ್ದು, 18 ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ. 20 ಶಸ್ತ್ರಾಸ್ತ್ರಗಳ ಪರವಾನಗಿ ರದ್ದು ಪಡಿಸಲಾಗಿದೆ. ಸಿಆರ್‌ಪಿಸಿ ಕಾಯ್ದೆಯಡಿ 5,329 ಪ್ರಕರಣಗಳನ್ನು ದಾಖಲಿಸಲಾಗಿದೆ. ಅವುಗಳಲ್ಲಿ 9,569 ವ್ಯಕ್ತಿಗಳಿಂದ ಮುಚ್ಚಳಿಕೆ ಪತ್ರ ಪಡೆಯಲಾಗಿದ್ದು, ಚುನಾವಣೆ ಘೋಷಣೆಯಾದ ದಿನದಿಂದ ಇಲ್ಲಿಯವರೆಗೆ 14,885 ಜಾಮೀನು ರಹಿತ ವಾರಂಟ್​​​ಗಳನ್ನು ಜಾರಿಗೊಳಿಸಲಾಗಿದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ:ಚುನಾವಣಾ ಅಕ್ರಮ 300 ಕೋಟಿ ರೂ‌ಗಡಿ ತಲುಪುವತ್ತ ಒಟ್ಟು ನಗದು ಮದ್ಯ ವಸ್ತುಗಳ ಜಪ್ತಿ

ABOUT THE AUTHOR

...view details