ಆಗ್ರಾ (ಉತ್ತರ ಪ್ರದೇಶ): ಆಗ್ರಾ ರೈಲ್ವೇ ವಿಭಾಗದ ಭೋಪಾಲ್‌ನಿಂದ ದೆಹಲಿಯ ನಿಜಾಮುದ್ದೀನ್ ನಿಲ್ದಾಣದೆಡೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಿಡಿಗೇಡಿಗಳು ಕಲ್ಲು ತೂರಿದ್ದಾರೆ. ಬುಧವಾರ ಘಟನೆ ನಡೆದಿದೆ. ರೈಲು ಕೋಚ್‌ನ ಗಾಜುಗಳು ಒಡೆದಿವೆ.
ರೈಲ್ವೇ ಮೂಲಗಳು ನೀಡಿದ ಮಾಹಿತಿ ಪ್ರಕಾರ, ಆಗ್ರಾದ ಮಾನಿಯಾ ಮತ್ತು ಜಜೌ ನಿಲ್ದಾಣಗಳ ನಡುವೆ ರೈಲು ಸಂಚರಿಸುತ್ತಿದ್ದಾಗ ಕಲ್ಲು ತೂರಲಾಗಿದೆ. ಸಿ-7 ಕೋಚ್‌ನ ಸೀಟ್ ಸಂಖ್ಯೆ 13-14ರ ಕಿಟಕಿ ಗಾಜುಗಳು ಒಡೆದಿವೆ. ರೈಲ್ವೇ ಸಿಬ್ಬಂದಿಯ ತಂಡ ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದೆ. ಘಟನೆಯ ತನಿಖೆ ನಡೆಯುತ್ತಿದೆ ಎಂದು ಆಗ್ರಾ ರೈಲ್ವೆ ವಿಭಾಗದ ಪಿಆರ್‌ಒ ಶ್ರೀವಾಸ್ತವ ತಿಳಿಸಿದ್ದಾರೆ. ಘಟನೆಯಲ್ಲಿ ಯಾವುದೇ ಪ್ರಯಾಣಿಕರಿಗೆ ಗಾಯಗಳಾಗಿಲ್ಲ.
ಈ ರೀತಿ ಕಲ್ಲು ತೂರಾಟ ನಡೆಯುತ್ತಿರುವುದು ಇದೇ ಮೊದಲಲ್ಲ. ಭೋಪಾಲ್‌ನಿಂದ ನಿಜಾಮುದ್ದೀನ್ ನಿಲ್ದಾಣದ ನಡುವೆ ಸಂಚರಿಸುತ್ತಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೂ ಕೂಡ ಕಲ್ಲು ತೂರಿದ ಘಟನೆ ನಡೆದಿತ್ತು.
ಅಜ್ಮೀರ್-ದೆಹಲಿ ವಂದೇ ಭಾರತ್ ರೈಲಿಗೆ ಕಲ್ಲು :ಜುಲೈ 19ರಂದು ದೆಹಲಿಯ ಪಾಲಂ ನಿಲ್ದಾಣದ ಸಮೀಪ ಅಜ್ಮೀರ್-ದೆಹಲಿ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಮೇಲೆ ದಾಳಿ ನಡೆದಿತ್ತು. ರೈಲಿಗೆ ಸಾಕಷ್ಟು ಹಾನಿಯಾಗಿತ್ತು. ರೈಲಿನ ಬಾಗಿಲು, ಗಾಜು, ಎಂಜಿನ್ ಸೇರಿದಂತೆ ಹಲವೆಡೆ ಕಲ್ಲಿನ ಗುರುತುಗಳಿದ್ದವು. ಇಂಥ ಘಟನೆಗಳು ಮರುಕಳಿಸುವುದನ್ನು ತಡೆಯಲು ವಾಯುವ್ಯ ರೈಲ್ವೆ ಅಧಿಕಾರಿ ಶಶಿ ಕಿರಣ್ ನೇತೃತ್ವದಲ್ಲಿ ವಿಶೇಷ ತಂಡ ರಚಿಸಲಾಗಿದೆ. ಈ ತಂಡ ತನಿಖೆ ನಡೆಸುತ್ತಿದ್ದು, ಕಿಡಿಗೇಡಿಗಳನ್ನು ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಅವರು ಎಚ್ಚರಿಕೆ ನೀಡಿದ್ದಾರೆ.
ಮೈಸೂರು-ಚೆನ್ನೈ ರೈಲಿಗೂ ಕಲ್ಲು ತೂರಾಟ : ಮೈಸೂರಿನಿಂದ ಚೆನ್ನೈಗೆ ಆಗಮಿಸಿದ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಪುರಚಿ ತಲೈವರ್ ಡಾ.ಎಂ.ಜಿ.ರಾಮಚಂದ್ರನ್ ಸೆಂಟ್ರಲ್ ರೈಲು ನಿಲ್ದಾಣ ತಲುಪಿತ್ತು. ಬಳಿಕ ಬೇಸಿನ್ ಬ್ರಿಡ್ಜ್ ರೈಲ್ವೇ ಯಾರ್ಡ್ ದಾಟಿ ಸೆಂಟ್ರಲ್ ರೈಲು ನಿಲ್ದಾಣ ತಲುಪುವ ಮಾರ್ಗದಲ್ಲಿ ಅಪರಿಚಿತ ವ್ಯಕ್ತಿಯೊಬ್ಬ ರೈಲಿಗೆ ಕಲ್ಲು ಎಸೆದಿದ್ದ. ಪರಿಣಾಮ, ಎರಡು ಕೋಚ್‌ಗಳ ಗ್ಲಾಸ್‌ಗಳು ಒಡೆದಿದ್ದವು. ರೈಲ್ವೇ ರಕ್ಷಣಾ ಪಡೆ ಪೊಲೀಸರು ಘಟನೆಗೆ ಸಂಬಂಧಿಸಿದಂತೆ ಸಮೀಪದ ಕಣ್ಗಾವಲು ಕ್ಯಾಮರಾಗಳ ದೃಶ್ಯಾವಳಿಗಳನ್ನು ಪರಿಶೀಲಿಸಿದ್ದರು.
ಮೋದಿ ಹಸಿರು ನಿಶಾನೆ ತೋರಿದ 2ನೇ ದಿನಕ್ಕೆ ರೈಲಿಗೆ ಕಲ್ಲು : ಜುಲೈ 7ರಂದು ಪ್ರಧಾನಿ ನರೇಂದ್ರ ಮೋದಿ ಅವರು ಗೋರಖ್‌ಪುರ - ಲಖನೌ ನಡುವಿನ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿಸಿದ್ದರು. ಜುಲೈ 9ರಿಂದ ರೈಲು ಔಪಚಾರಿಕ ಕಾರ್ಯಾಚರಣೆ ಆರಂಭಿಸಿದೆ. ಇದಾದ ಎರಡೇ ದಿನಗಳಲ್ಲಿ ಕಲ್ಲು ತೂರಾಟ ನಡೆಸಲಾಗಿತ್ತು. ಯಾವುದೇ ಪ್ರಯಾಣಿಕರಿಗೆ ಗಾಯಗಳಾದ ವರದಿಯಾಗಿಲ್ಲ.
ಇದನ್ನೂ ಓದಿ:ಮೂತ್ರ ವಿಸರ್ಜನೆಗೆಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಹತ್ತಿ 6,000 ರೂಪಾಯಿ ಕಳೆದುಕೊಂಡ ವ್ಯಕ್ತಿ!