ವಿಶಾಖಪಟ್ಟಣಂ (ಆಂಧ್ರಪ್ರದೇಶ):ಎರಡು ತೆಲುಗು ರಾಷ್ಟ್ರಗಳನ್ನು ಸಂಧಿಸುವ ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ ಮಾಡಲಾಗಿದೆ. ವಿಶಾಖಪಟ್ಟಣಂ ಮತ್ತು ಸಿಕಂದರಾಬಾದ್ ಮಧ್ಯೆ ಮೂರು ತಿಂಗಳ ಹಿಂದೆ ಆರಂಭವಾದ ಈ ರೈಲಿಗೆ ಮೂರನೇ ಬಾರಿಗೆ ಕಲ್ಲು ಹೊಡೆಯಲಾಗಿದೆ. ಘಟನೆಯಲ್ಲಿ ಕಿಟಿಕಿಯ ಗಾಜು ಜಖಂಗೊಂಡಿದೆ.
ಬುಧವಾರ ವಿಶಾಖಪಟ್ಟಣದಿಂದ ವಂದೇ ಭಾರತ್ ಎಕ್ಸ್‌ಪ್ರೆಸ್ 05:45 ಗಂಟೆಗೆ ಹೊರಡಬೇಕಿತ್ತು. ನಿಗದಿತ ನಿರ್ಗಮನಕ್ಕೂ ಮೊದಲು ಯಾರೋ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ರೈಲನ್ನು 09:45 ಗಂಟೆಗೆ ಮರು ನಿಗದಿಪಡಿಸಲಾಯಿತು. ಕಲ್ಲೇಟಿನಿಂದ ರೈಲಿನ C-8 ಕೋಚ್‌ನ ಕಿಟಕಿಯ ಗಾಜು ಒಡೆದು ಹೋಗಿದೆ ಎಂದು ರೈಲ್ವೆ ಇಲಾಖೆ ಅಧಿಕೃತ ಪ್ರಕಟಣೆ ತಿಳಿಸಿದೆ.
ಇದಕ್ಕೂ ಮುನ್ನ ಜನವರಿಯಲ್ಲಿ ಆಂಧ್ರಪ್ರದೇಶದ ವಿಶಾಖಪಟ್ಟಣಂ ನಗರದಲ್ಲಿ ವಂದೇ ಭಾರತ್ ರೈಲಿನ ನಿರ್ವಹಣೆಯ ವೇಳೆ ಕಲ್ಲು ತೂರಾಟ ನಡೆಸಲಾಗಿತ್ತು. ವಿಶಾಖಪಟ್ಟಣಂನ ಕಂಚರಪಾಲೆಂ ಬಳಿ ನಡೆದ ದಾಳಿಯಲ್ಲಿ ಕೋಚ್‌ನ ಗಾಜನ್ನು ಹೊಡೆದು ಹಾಕಲಾಗಿತ್ತು.
"ವಂದೇ ಭಾರತ್ ರೈಲು ನಿರ್ವಹಣೆಗಾಗಿ ಮತ್ತು ಅಲ್ಲಿಂದ ಹೊರಡಲು ವಿಶಾಖಪಟ್ಟಣವನ್ನು ತಲುಪುತ್ತಿದ್ದಂತೆ ಕೆಲವು ಅಪರಿಚಿತ ವ್ಯಕ್ತಿಗಳು ಕಲ್ಲು ತೂರಾಟ ನಡೆಸಿದ್ದಾರೆ. ದುಷ್ಕರ್ಮಿಗಳ ಪತ್ತೆಗಾಗಿ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಲಾಗುತ್ತಿದೆ. ರೈಲ್ವೇ ರಕ್ಷಣಾ ಪಡೆ (ಆರ್‌ಪಿಎಫ್) ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದೆ ಎಂದು ವಲಯ ರೈಲ್ವೇ ಮ್ಯಾನೇಜರ್ (ಡಿಆರ್‌ಎಂ) ಅನುಪ್ ಕುಮಾರ್ ಸೇತುಪತಿ ತಿಳಿಸಿದರು.
"ಇದೊಂದು ಅತ್ಯಂತ ದುರದೃಷ್ಟಕರ ಘಟನೆ. ಕಂಚರಪಾಲೆಂ ಬಳಿ ಅಪರಿಚಿತರು ರೈಲ್ವೆ ಕೋಚ್ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ ಕೋಚ್ ಗಾಜು ಒಡೆದಿದೆ. ನಾವು ಸಿಸಿಟಿವಿ ಕ್ಯಾಮೆರಾಗಳನ್ನು ಪರಿಶೀಲಿಸುತ್ತಿದ್ದೇವೆ. ಆರೋಪಿಗಳು ಸಿಕ್ಕಿಬಿದ್ದಲ್ಲಿ ಶಿಕ್ಷೆ ವಿಧಿಸಲಾಗುವುದು. ರೈಲ್ವೆ ಸಾರ್ವಜನಿಕರ ಹಣದಿಂದ ತಯಾರಾಗಿದೆ. ಅದರ ಮೇಲೆ ಕಲ್ಲು ತೂರಾಟ ನಡೆಸಿ ವ್ಯರ್ಥ ಮಾಡಬೇಡಿ ಎಂದು ಅಧಿಕಾರಿಗಳು ಮನವಿ ಮಾಡಿದ್ದಾರೆ. ಹಾಳಾಗಿರುವ ಕಿಟಕಿಯ ಗಾಜಿನ ಬೆಲೆ ಸುಮಾರು 1 ಲಕ್ಷ ಎಂದು ಅಂದಾಜಿಸಲಾಗಿದೆ.
ಪಶ್ಚಿಮ ಬಂಗಾಳದಲ್ಲಿ ಕಲ್ಲೇಟು:ಜನವರಿ 2 ರಂದು, ಮಾಲ್ಡಾ ಬಳಿ ಹೌರಾದಿಂದ ನ್ಯೂ ಜಲ್ಪೈಗುರಿಗೆ ಸಂಪರ್ಕ ಕಲ್ಪಿಸುವ ವಂದೇ ಭಾರತ ರೈಲಿನ ಮೇಲೆಯೂ ಕಿಡಿಗೇಡಿಗಳು ಕಲ್ಲು ಹೊಡೆದಿದ್ದರು. ಕಲ್ಲು ಹೊಡೆದ ನಂತರ ಎಕ್ಸ್ಪ್ರೆಸ್ನ ಕಿಟಕಿ ಗಾಜುಗಳು ಒಡೆದಿದ್ದವು. ಡಾರ್ಜಿಲಿಂಗ್‌ನ ಫನ್ಸಿಡೆವಾ ಪ್ರದೇಶದ ಬಳಿ ಆಗಂತುಕರು ಈ ದಾಳಿ ನಡೆಸಿದ್ದರು. ಕಲ್ಲು ಬಿದ್ದರೂ ರೈಲಿನಲ್ಲಿದ್ದ ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ರೈಲ್ವೆ ಇಲಾಖೆ ತಿಳಿಸಿತ್ತು. ಇದಾದ ಬಳಿಕ ರಾಜಕೀಯ ಕಿತ್ತಾಟಕ್ಕೂ ಕಾರಣವಾಗಿತ್ತು. ಆದರೆ, ಈ ರೀತಿಯ ಘಟನೆ ನಡೆದಿಲ್ಲ ಎಂದು ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಹೇಳಿಕೆ ನೀಡಿದ್ದರು.
ಬೆಂಗಳೂರಿನಲ್ಲಿ ದಾಳಿ: ಕರ್ನಾಟಕದ ಮೊದಲ ವಂದೇ ಭಾರತ ರೈಲಿನ ಮೇಲೂ ಕಿಡಿಗೇಡಿಗಳು ದಾಳಿ ಮಾಡಿದ್ದರು. ಕೆ.ಆರ್.ಪುರಂ ಹಾಗೂ ಕಂಟೋನ್ಮೆಂಟ್ ನಿಲ್ದಾಣದ ಮಾರ್ಗದ ನಡುವೆ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿಗೆ ಕಲ್ಲು ತೂರಾಟ ನಡೆದಿತ್ತು. ಚೆನ್ನೈ-ಬೆಂಗಳೂರು-ಮೈಸೂರು ಮಾರ್ಗದಲ್ಲಿ ಸಂಚರಿಸುವ ರೈಲಿನ ಸಿ-4 ಹಾಗೂ ಸಿ-5 ಬೋಗಿಯ ಆರು ಕಿಟಕಿ ಗಾಜುಗಳಿಗೆ ಹಾನಿಯಾಗಿತ್ತು.
ಓದಿ:ವಂದೇ ಭಾರತ್ ರೈಲಿನ ಮೇಲೆ ಮತ್ತೆ ಕಲ್ಲು ತೂರಾಟ.. ಸ್ಥಳಕ್ಕೆ ಧಾವಿಸಿ ಪರಿಶೀಲಿಸಿದ ರೈಲ್ವೆ ಪೊಲೀಸರು