ಜೈಪುರ:ಜೈಪುರ ಗ್ರಾಮಾಂತರ ಭಾಗದಲ್ಲಿ ಭಾನುವಾರ ನಡೆದ ಹಿಂದು ರಣಭೇರಿ ಬೈಕ್ ರ್‍ಯಾಲಿಯ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ವರದಿಯಾಗಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ 11 ಮಂದಿಯನ್ನು ರಾಜಸ್ಥಾನ ಪೊಲೀಸರು ಬಂಧಿಸಿದ್ದಾರೆ. ಬೈಕ್ ರ್ಯಾಲಿ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ ಬಳಿಕ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಹೆಚ್ಚುವರಿ ಪೊಲೀಸ್ ಪಡೆಯನ್ನು ನಿಯೋಜಿಸಲಾಗಿದೆ. ಸದ್ಯ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂದೂ ಹೊಸ ವರ್ಷಾಚರಣೆ (ಯುಗಾದಿ) ಹಿನ್ನೆಲೆ ಭಾನುವಾರದಂದು ಖೇಲ್ ಮೈದಾನ್ ಚಂದವಾಜಿಯಿಂದ ಹಿಂದೂ ರಣಭೇರಿ ಬೈಕ್ ರ್‍ಯಾಲಿ ಆರಂಭಗೊಂಡಿತು. ಅದು ವಿವಿಧ ಪ್ರದೇಶಗಳಲ್ಲಿ ಸಂಚರಿಸುತ್ತಿತ್ತು. ಮಧ್ಯಾಹ್ನದ ವೇಳೆ ರೈಸರ್ ಪೊಲೀಸ್ ಠಾಣೆ ವ್ಯಾಪ್ತಿಯ ತಾಲಾ ಜೋಹ್ರಾ ಬಳಿ ರ್ಯಾಲಿ ಬಂದಾಗ ಕೆಲ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದಾರೆ. ರ್‍ಯಾಲಿಯ ಭದ್ರತೆಗೆ ನಿಯೋಜನೆಗೊಂಡ ಪೊಲೀಸರು ತಕ್ಷಣ ಪರಿಸ್ಥಿತಿ ನಿಯಂತ್ರಿಸಲು ಸಾಧ್ಯವಾಗಿಲ್ಲ. ಬಳಿಕ ಹೆಚ್ಚಿನ ಪೊಲೀಸರನ್ನು ಕರೆಸಿ ಬಂದೋಬಸ್ತ್ ನೀಡಿದ ಬಳಿಕ ದುಷ್ಕರ್ಮಿಗಳು ಸ್ಥಳದಿಂದ ಕಾಲ್ಕಿತ್ತಿದ್ದಾರೆ.
ರ್‍ಯಾಲಿಯ ಮೇಲೆ ನಡೆದ ಕಲ್ಲು ತೂರಾಟದ ಬಳಿಕ ಸಾಧುರಾಮ್ ಜಾಟ್ ಎಂಬುವವರು ರೈಸರ್ ಪೊಲೀಸ್ ಠಾಣೆಗೆ ಈ ಬಗ್ಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ಪೊಲೀಸರು 11 ಮಂದಿಯನ್ನು ಬಂಧಿಸಿದ್ದಾರೆ. ಸದ್ಯಕ್ಕೆ ವಿಚಾರಣೆ ನಡೆಸಲಾಗುತ್ತಿದೆ. ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದರು.
ರಾಜಸ್ಥಾನ ಬಿಜೆಪಿ ಟೀಕೆ:ರ್‍ಯಾಲಿಯ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದನ್ನು ಬಿಜೆಪಿ ಖಂಡಿಸಿದೆ. ಬಿಜೆಪಿ ಶಾಸಕ ರಾಮಲಾಲ್ ಶರ್ಮಾ ರ್‍ಯಾಲಿಗೆ ಸೂಕ್ತ ಭದ್ರತೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ ಎಂದು ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.