ಹ್ನಾಥಿಯಾಲ್ (ಮಿಜೋರಾಂ): ದಕ್ಷಿಣ ಮಿಜೋರಾಂನ ಹ್ನಾಥಿಯಾಲ್ ಜಿಲ್ಲೆಯಲ್ಲಿ ಸೋಮವಾರ ದಿಢೀರ್ ಕುಸಿದುಬಿದ್ದ ಕಲ್ಲು ಕ್ವಾರಿಯ ಅವಶೇಷಗಳಿಂದ ಎಂಟು ಮೃತದೇಹಗಳನ್ನು ಹೊರತೆಗೆಯಲಾಗಿದೆ. ಕ್ವಾರಿ ಕೆಲಸ ನಡೆಯುತ್ತಿದ್ದ ಸ್ಥಳದಲ್ಲಿ 12 ಜನರು ನಾಪತ್ತೆಯಾಗಿದ್ದರು.
ನಾಪತ್ತೆಯಾಗಿರುವ ಹನ್ನೆರಡು ಮಂದಿಯಲ್ಲಿ ನಾಲ್ವರು ಎಬಿಸಿಐ ಇನ್‌ಫ್ರಾಸ್ಟ್ರಕ್ಚರ್ಸ್ ಪ್ರೈವೇಟ್ ಲಿಮಿಟೆಡ್‌ನ ಉದ್ಯೋಗಿಗಳಾಗಿದ್ದರೆ, 8 ಮಂದಿ ಗುತ್ತಿಗೆದಾರರ ಉದ್ಯೋಗಿಗಳು ಎಂದು ತಿಳಿದುಬಂದಿದೆ. ಮಂಗಳವಾರ(ಇಂದು) ಬೆಳಗ್ಗೆ ಇಬ್ಬರು ಅಧಿಕಾರಿಗಳು ಮತ್ತು 13 ಸಿಬ್ಬಂದಿಯನ್ನು ಒಳಗೊಂಡ ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (ಎನ್‌ಡಿಆರ್‌ಎಫ್) ತಂಡ ರಕ್ಷಣಾ ಕಾರ್ಯಕ್ಕೆ ಸ್ಥಳಕ್ಕೆ ಆಗಮಿಸಿದೆ.
ಹ್ನಾಥಿಯಾಲ್ಪೊಲೀಸ್ ವರಿಷ್ಠಾಧಿಕಾರಿ (ಎಸ್ಪಿ) ವಿನೀತ್ ಕುಮಾರ್ ಪ್ರತಿಕ್ರಿಯಿಸಿ, 'ಸೋಮವಾರ ಮಧ್ಯಾಹ್ನ 3 ಗಂಟೆಯ ಸುಮಾರಿಗೆ ಹ್ನಾಥಿಯಾಲ್ ಪಟ್ಟಣದ ಸಮೀಪವಿರುವ ಮೌದರ್ ಗ್ರಾಮದಲ್ಲಿ ಘಟನೆ ಸಂಭವಿಸಿದೆ. ಈ ಸಂದರ್ಭದಲ್ಲಿ 13 ಜನರು ಕೆಲಸ ಮಾಡುತ್ತಿದ್ದರು. ಒಬ್ಬ ಕಾರ್ಮಿಕ ಮಾತ್ರ ಸ್ಥಳದಿಂದ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ' ಎಂದು ತಿಳಿಸಿದ್ದಾರೆ.
ಕಲ್ಲಿನ ಕ್ವಾರಿ ಎಬಿಸಿಐ ಎಂಬ ಸಂಸ್ಥೆಯ ಒಡೆತನದಲ್ಲಿದೆ. ಹ್ನಾಥಿಯಾಲ್ ಪಟ್ಟಣ ಮತ್ತು ಡಾನ್ ಗ್ರಾಮದ ನಡುವಿನ ರಾಷ್ಟ್ರೀಯ ಹೆದ್ದಾರಿಯ ಒಂದು ಭಾಗದ ವಿಸ್ತರಣೆ ಕಾರ್ಯ ನಡೆಯುತ್ತಿದೆ. ದುರ್ಘಟನೆಯಲ್ಲಿ ಕಾರ್ಮಿಕರ ಜೊತೆ ಐದು ಮಣ್ಣು ಅಗೆಯುವ ಯಂತ್ರಗಳು, ಒಂದು ಸ್ಟೋನ್ ಕ್ರಷರ್ ಮತ್ತು ಡ್ರಿಲ್ಲಿಂಗ್ ಮಷಿನ್ ಅವಶೇಷಗಳಡಿಯಲ್ಲಿ ಸಂಪೂರ್ಣವಾಗಿ ಹೂತುಹೋಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ:ಮೊರ್ಬಿ ಬಳಿಕ ಮತ್ತೊಂದು ದುರಂತ.. ಕಾಲುವೆಗೆ ಬಿದ್ದು ಒಂದೇ ಕುಟುಂಬದ ಐವರ ದುರ್ಮರಣ